ಆಲೂರುಸಿದ್ದಾಪುರ, ಅ. ೧೦: ಬಾಣವಾರ, ಸಂಗಯ್ಯನಪುರ, ಭುವಂಗಾಲ, ದೊಡ್ಡಳ್ಳಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗುತ್ತಿದ್ದು ಈ ವ್ಯಾಪ್ತಿಯಲ್ಲಿ ಹಗಲು ರಾತ್ರಿ ಎನ್ನದೆ ಕಾಡಾನೆ ಅರಣ್ಯದಿಂದ ರಸ್ತೆ ದಾಟಿ ಹಳ್ಳಿಯತ್ತ ಸಂಚರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಬಾಣವಾರ ಮೀಸಲು ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿವೆ. ಕೆಲವೊಮ್ಮೆ ಒಂಟಿ ಸಲಗ ಮತ್ತೆ ಕೆಲವೊಮ್ಮೆ ಹಿಂಡು ಹಿಂಡಾಗಿ ಈ ವ್ಯಾಪ್ತಿಯಲ್ಲಿ ಕಾಡಾನೆಗಳು ಸಂಚರಿಸುತ್ತವೆ. ಕುಶಾಲನಗರ-ಶನಿವಾರಸಂತೆ ರಾಜ್ಯ ಹೆದ್ದಾರಿಯಲ್ಲಿರುವ ಆಲೂರುಸಿದ್ದಾಪುರ, ಆಲದಮರ, ದೊಡ್ಡಳ್ಳಿ, ಭುವಂಗಾಲ, ಸಂಗಯ್ಯನಪುರ, ಕಾಡುಹಾಡಿ ಗ್ರಾಮಗಳ ಎರಡು ಬದಿಗಳಲ್ಲಿ ಬಾಣವಾರ ಮೀಸಲು ಅರಣ್ಯ ಇರುವುದರಿಂದ ಕಾಡಾನೆಗಳು ರಸ್ತೆ ದಾಟಿ ಮತ್ತೊಂದು ಬದಿಯಲ್ಲಿರುವ ಅರಣ್ಯದೊಳಗೆ ಸಂಚರಿಸುತ್ತವೆ. ಇದರಿಂದ ವಾಹನ ಸವಾರರು, ಗ್ರಾಮಸ್ಥರು ಭಯದಿಂದ ದಿನದೂಡುವಂತಾಗಿದೆ.
ಆಲದಮರ ಗ್ರಾಮದಿಂದ ಬಾಣವಾರ ಜಂಕ್ಸನ್‌ವರೆಗೂ ಮುಖ್ಯರಸ್ತೆಯ ಎರಡು ಬದಿಯಲ್ಲಿ ಅರಣ್ಯ ಇಲಾಖೆ ಕಾಡಾನೆ ದಾಟದಂತೆ ಸೋಲರ್ ಬೇಲಿ ಮತ್ತು ಕಂದಕ ನಿರ್ಮಿಸಿದ್ದರೂ ಕಾಡಾನೆಗಳು ಏನನ್ನು ಲೆಕ್ಕಿಸದೆ ರಸ್ತೆ ದಾಟಿ ಮತ್ತೊಂದು ಬದಿಯಲ್ಲಿರುವ ಅರಣ್ಯದೊಳಗೆ ನುಸುಳುತ್ತಿವೆ. ಭಾನುವಾರ ಬೆಳಗ್ಗೆ ಒಂಟಿ ಸಲಗವೊಂದು ಬಾಣವಾರ ಗ್ರಾಮದ ಬಳಿ ಸೋಲಾರ್ ಚೇಲಿಯನ್ನು ಕಾಲಿನಿಂದ ತುಳಿದು ಬೀಳಿಸಿ ಮುಖ್ಯ ರಸ್ತೆಯನ್ನು ದಾಟಿ ಮತ್ತೊಂದು ಬದಿಯಲ್ಲಿರುವ ಅರಣ್ಯದೊಳಗೆ ನುಸುಳಿದೆ.
ಈ ವೇಳೆಯಲ್ಲಿ ದ್ವಿಚಕ್ರ ವಾಹನ, ಕಾರು, ಜೀಪು, ಲಾರಿ ಸವಾರರು ಒಂಟಿ ಸಲಗ ರಸ್ತೆ ದಾಟುತ್ತಿರುವುದನ್ನು ಗಮನಿಸಿ ಸ್ವಲ್ಪ ಹೊತ್ತು ವಾಹನವನ್ನು ನಿಲ್ಲಿಸಿಕೊಂಡ ಬಳಿಕ ತೆರಳಿದ್ದಾರೆ.
- ದಿನೇಶ್ ಮಾಲಂಬಿ