ಸೋಮವಾರಪೇಟೆ, ಅ. ೧೦ : ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಈ ಬಾರಿ ಅರಳವಾಗಿ ಆಯುಧ ಪೂಜೋತ್ಸವ ಆಚರಣೆಗೆ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಜಿ. ಸುರೇಶ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದೆರಡು ವರ್ಷಗಳ ಹಿಂದಿನವರೆಗೂ ಜನೋತ್ಸವದಂತೆ ಆಚರಣೆಯಾಗುತ್ತಿದ್ದ ಆಯುಧ ಪೂಜೋತ್ಸವ, ಕೊರೊನಾ ಹಿನ್ನೆಲೆ ಸರಳ ಅಚರಣೆಗೆ ಸೀಮಿತವಾಗಿದ್ದು, ಈ ಬಾರಿಯೂ ಸಂಘದಿAದ ಪೂಜೋತ್ಸವ ನಡೆಸಲಾಗುವುದು ಎಂದರು.

ತಾ. ೧೪ರಂದು ಬೆಳಿಗ್ಗೆ ಸಂಘದ ಕಚೇರಿಯಲ್ಲಿ ಪೂಜೆ ಸಲ್ಲಿಸಿ, ನಂತರ ಪಟ್ಟಣದ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಗುವುದು. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿರುವವರಿಗೆ ಹಣ್ಣು ಹಂಪಲು ವಿತರಣೆ ಮಾಡಲಾಗುವುದು. ನಂತರ ಸಾರ್ವಜನಿಕರಿಗೆ ಲಘು ಉಪಹಾರ ವಿತರಿಸಲಾಗುವುದು ಎಂದು ಸುರೇಶ್ ತಿಳಿಸಿದರು.

ಕೊರೊನಾ ಸಂದರ್ಭ ಸಂಘದ ೧೫ಕ್ಕೂ ಅಧಿಕ ಸದಸ್ಯರು ಮೃತಪಟ್ಟಿದ್ದು, ಎಲ್ಲರ ಕುಟುಂಬಕ್ಕೂ ಮರಣ ನಿಧಿ ಹಾಗೂ ಸಂಘದಿAದ ಸಹಾಯ ಹಸ್ತ ನೀಡಲಾಗಿದೆ. ಸಂಘದ ಸದಸ್ಯತ್ವವನ್ನು ನವೀಕರಣ ಮಾಡಿಕೊಳ್ಳದ ಸದಸ್ಯರು ತಕ್ಷಣ ಕಚೇರಿಗೆ ಆಗಮಿಸಿ, ಸದಸ್ಯತ್ವ ನವೀಕರಣ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಈ ಹಿಂದೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ೧೩ ಲಕ್ಷ ವೆಚ್ಚದಲ್ಲಿ ಮೋಟಾರ್ ಯೂನಿಯನ್ ಸ್ವಂತ ಕಟ್ಟಡ ಹೊಂದಿತ್ತು. ಹೈಟೆಕ್ ಮಾರುಕಟ್ಟೆ ನಿರ್ಮಾಣ ಸಂದರ್ಭ ಅದನ್ನು ತೆರವುಗೊಳಿಸಿದ್ದು, ಇದೀಗ ಸಂಘದ ಹಣದಲ್ಲಿಯೇ ಕ್ಲಬ್‌ರಸ್ತೆಯಲ್ಲಿ ರೂ. ೨೬ ಲಕ್ಷದಲ್ಲಿ ನಿವೇಶನ ಖರೀದಿಸಲಾಗಿದೆ ಎಂದು ಸುರೇಶ್ ತಿಳಿಸಿದರು.

ಸಂಘದಲ್ಲಿ ಉಳಿತಾಯವಾಗಿದ್ದ ಹಣದೊಂದಿಗೆ, ಸದಸ್ಯರುಗಳ ಸಹಕಾರದಿಂದ ರೂ.೨೬ ಲಕ್ಷ ವೆಚ್ಚದಲ್ಲಿ ಕಟ್ಟಡ ಹಾಗೂ ನಿವೇಶನ ಖರೀದಿಸಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಕಚೇರಿ ಹಾಗೂ ಭವನ ನಿರ್ಮಿಸಲಾಗುವುದು ಎಂದು ಮಾಹಿತಿಯಿತ್ತರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಾಲಕೃಷ್ಣ, ಕಾರ್ಯದರ್ಶಿ ಇಬ್ರಾಹಿಂ, ಸಲಹೆಗಾರ ಡ್ಯಾನಿ ಡೋಮಿನಿಕ್, ಸೋಮಯ್ಯ ಅವರುಗಳು ಉಪಸ್ಥಿತರಿದ್ದರು.