ಮಡಿಕೇರಿ, ಅ. ೧೦: ಕೊಡವ ಜನಾಂಗವು ಪ್ರಪಂಚದ ಪುರಾತನ ಮಾನವ ಕುಲದ ಮೂಲ ಜನಾಂಗವಾಗಿದ್ದು ಸೃಷ್ಟಿ ಮತ್ತು ಪ್ರಕೃತಿಯೊಂದಿಗೆ ಬಾಳಿ ಬದುಕುತ್ತಿರುವ ಬುಡಕಟ್ಟು ವಂಶ. ಅನಾದಿಕಾಲದಿಂದಲೂ ಅಗ್ನಿ ಮತ್ತು ಹಿರಿಯರನ್ನು ಪೂಜಿಸುವ ಕೊಡವರು, ಪ್ರತಿಯೊಂದು ವಸ್ತುವಿನಲ್ಲಿಯೂ ದೇವಿ ಅಥವಾ ತಾಯಿಯನ್ನು ಕಾಣುತ್ತಾರೆ. ಇಂದಿಗೂ ಕೂಡ ಹೆಣ್ಣಿಗೆ ವಿಶೇಷ ಗೌರವ ಕೊಡುವ ಮುಂಚೂಣಿ ಜನಾಂಗವಾಗಿದೆ. ಕೊಡವರ ನೈಜ ಇತಿಹಾಸ ಪುರಾತನ ಕಾಲದಿಂದಲೂ ಬಾಯಿಂದ ಬಾಯಿಗೆ ಬೆಳೆದು ಬಂದ ಜಾನಪದ ಬಾಳೋಪಾಟಿನಲಿ ಅಡಗಿದ್ದು, ಪ್ರತಿಯೊಬ್ಬರೂ ಇದನ್ನು ಅರಿಯುವ ಅನಿವಾರ್ಯತೆ ಇದೆ, ಎಂದು ಇಂದು ಅಖಿಲಕೊಡವ ಸಮಾಜದಲ್ಲಿ ನಡೆದ ಕೊಡವ ಕೌಟುಂಬಿಕ ಬಾಳೋ ಪಾಟ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ನೆರೆದ ಅತಿಥಿಗಳು ಅಭಿಪ್ರಾಯ ಪಟ್ಟರು.
ಕೊಡವಾಮೆರ ಕೊಂಡಾಟ ಸಂಘಟನೆಯ ಸ್ಥಾಪಕ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಖಿಲಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಮಾತನಾಡಿ, ಪ್ರಾರಂಭವಾಗಿ ಕೇವಲ ಎರಡೇ ವರ್ಷದಲ್ಲಿ ಹೆಚ್ಚು ಸೇವೆ ಮಾಡಿರುವ ಸಂಘಟನೆ ನಿರಂತರ ಕಾರ್ಯಚಟುವಟಿಕೆಯ ಮೂಲಕ, ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದೆ. ಅದರಲ್ಲೂ ವಿನಾಶದ ಅಂಚಿನಲ್ಲಿದ್ದ ಬಾಳೋಪಾಟ್ ಸ್ಪರ್ಧೆ ಆಯೋಜನೆ ಮಾಡುವ ಮೂಲಕ, ಕೊಡವರ ಮೂಲ ಇತಿಹಾಸದ ಅರಿವು ಮೂಡಿಸಿರುವುದು ಹೆಮ್ಮೆಯ ವಿಚಾರ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ಪರ್ಧೆಯ ಮೊದಲ ನಗದು ಬಹುಮಾನ ಪ್ರಾಯೋಜಕರೂ ಹಾಗೂ ಮೈಸೂರು ವಿಶ್ವ ವಿದ್ಯಾನಿಲಯ ಸಿಂಡಿಕೇಟ್ ಸದಸ್ಯ ಮಾಚಿಮಂಡ ಗಪ್ಪಣ್ಣ ಮಾತನಾಡಿ, ಕೊಡವಾಮೆರ ಕೊಂಡಾಟ ಸಂಘಟನೆಯು ಪ್ರಾರಂಭವಾಗಿ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಸಾಕಷ್ಟು ಜನಾಂಗೀಯ ಬೆಳವಣಿಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಶ್ಲಾಘನೀಯ, ಮುಂದೆಯೂ ಕೂಡ ಈ ಸಂಘಟನೆಗೆ ಹೆಚ್ಚೆಚ್ಚು ಸಹಕಾರ ಸಮಾಜದಿಂದ ದೊರಕುವಂತಾಗಲಿ ಎಂದರು. ಮತ್ತೋರ್ವ ಅತಿಥಿ ಸಂಘಟನೆಯ ಖಜಾಂಚಿ ಹಾಗೂ ದ್ವಿತೀಯ ನಗದು ಬಹುಮಾನ ಪ್ರಾಯೋಜಕರಾದ ಸಣ್ಣುವಂಡ ಕಿಸು ದೇವಯ್ಯ ಮಾತನಾಡಿ, ಸಂಘಟನೆಯು ಈ ಬಾರಿ ಪ್ರಥಮವಾಗಿ ಪ್ರಾರಂಭಿಸಿರುವ ಈ ಬಾಳೋಪಾಟ್ ಸ್ಪರ್ಧೆಯು ಮುಂದೆ ವರ್ಷಂಪ್ರತಿ ನಡೆಯಲಿದೆ, ಇದಕ್ಕೆ ಎಲ್ಲರ ಸಹಕಾರ ಇರಲಿ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡವಾಮೆರ ಕೊಂಡಾಟ ಸಂಘಟನೆಯ ನಿರ್ದೇಶಕ ಮೂರನೇ ನಗದು ಬಹುಮಾನ ಪ್ರಾಯೋಜಕರಾದ ಚಿರಿಯಪಂಡ ವಿಶು ಕಾಳಪ್ಪ ಅವರು, ಸಂಘಟನೆಯ ಧ್ಯೇಯ ಮತ್ತು ಸ್ಪರ್ಧೆ ನಡೆದ ಹಾದಿಯನ್ನು ವಿವರಿಸಿದರು. ತೀರ್ಪುಗಾರರಾದ ಚೀಯಕ್ಪೂವಂಡ ದೇವಯ್ಯ, ಕಾಳಿಮಾಡ ಮೋಟಯ್ಯ, ವಿಜೇತರಾದ ನಂದಿರ, ಓಡಿಯಂಡ, ಚೇನಂಡ ಒಕ್ಕ ಪ್ರತಿನಿಧಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸ್ಪರ್ದೆಯ ಎಲ್ಲಾ ಸ್ಮರಣಿಕೆಗಳನ್ನು ಪ್ರಾಯೋಜಕರಾದ ಚಿರಿಯಪಂಡ ರೇಕಾವಿಶು ಅವರು ಪ್ರಾಯೋಜಿಸಿದರೆ, ವೆದಿಕೆಯಲ್ಲಿ ಅಖಿಲ ಕೊಡವ ಸಮಾಜ ಗೌರವ ಕಾರ್ಯದರ್ಶಿ ಅಮ್ಮಣಿಚಂಡ ರಾಜ್ ನಂಜಪ್ಪ, ಹಿರಿಯ ಕಲಾವಿದ ನೆರವಂಡ ಉಮೇಶ್, ಸಾಹಿತಿ ಕರೋಟಿರ ಶಶಿ ಸುಬ್ರಮಣಿ ಅವರುಗಳು ಉಪಸ್ಥಿತಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಚಾಮೇರ ದಿನೇಶ್ ಬೆಳ್ಯಪ್ಪ ಮುಂದಿನ ಬಾರಿಯಿಂದ ಹಲವು ವಿಭಿನ್ನ ಉತ್ತೇಜನಾತ್ಮಕ ಬಹುಮಾನಗಳನ್ನು ನೀಡಿ ಮತ್ತಷ್ಟು ಕುಟುಂಬಗಳನ್ನು ಆಕರ್ಷಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಕಾರ್ಯಕರ್ಮದ ಮೊದಲಿಗೆ ಕೊಡವಾಮೆರ ಕೊಂಡಾಟ ಸಂಘಟನೆಯ ಹಿರಿಯ ಸದಸ್ಯ ಮಾಳೇಟಿರ ಶ್ರೀನಿವಾಸ್ ಅವರು ಒಕ್ಕಣೆ ಕಟ್ಟಿ ಕಾರೋಣರಿಗೆ ಅಕ್ಕಿ ಹಾಕಿದರೆ, ಉಪಾಧ್ಯಕ್ಷ ಮಾಳೇಟಿರ ಅಜಿತ್ ಪೂವಣ್ಣ ಸ್ವಾಗತಿಸಿ, ಪೈಪೋಟಿ ಸಂಚಾಲಕ ಗಿರೀಶ್ ಭೀಮಯ್ಯ ವಂದಿಸಿ, ಸದಸ್ಯೆ ಕುಲ್ಲಚಂಡ ದೇಚಮ್ಮ ಕೇಸರಿ ಕಾರ್ಯಕ್ರಮ ನಿರೂಪಿಸಿದರು.