ಸೋಮವಾರಪೇಟೆ, ಅ.೧೧: ಸಮೀಪದ ಗೌಡಳ್ಳಿ ನವದುರ್ಗಾ ಪರಮೇಶ್ವರಿ ದೇವಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ ಗೌಡಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಗೆ ಹಲವಷ್ಟು ಇಲಾಖಾಧಿಕಾರಿಗಳು ಗೈರಾದ ಹಿನ್ನೆಲೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿ, ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

ಪಂಚಾಯಿತಿ ಉಪಾಧ್ಯಕ್ಷೆ ರೋಹಿಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಅಧಿಕಾರಿಗಳ ಗೈರಿನ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಗ್ರಾಮ ಸಭೆಯಲ್ಲಿ ಅವಕಾಶವಿದೆ;ಆದರೆ ಅಧಿಕಾರಿಗಳೇ ಗೈರು ಹಾಜರಾದರೆ ಗ್ರಾಮಸಭೆಯ ಅವಶ್ಯಕತೆ ಯಾಕೆ? ಎಂದು ಕೃಷಿಕರಾದ ಗೌಡಳ್ಳಿ ರಮೇಶ್, ಕೂಗೂರು ವಸಂತ್, ಹಿರಿಕರ ಸುಬ್ರಮಣಿ ಮತ್ತಿತರರು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮ ಸಭೆಗೆ ಅರಣ್ಯ, ಸೆಸ್ಕ್, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆಯ ಅಧಿಕಾರಿಗಳು ಗೈರಾಗಿರುವುದರಿಂದ ಅವರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ನೋಡೆಲ್ ಅಧಿಕಾರಿ ಪಶು ವೈದ್ಯಕೀಯ ಇಲಾಖೆಯ ವೈದ್ಯಾಧಿಕಾರಿ ಸತೀಶ್ ಸಭೆಗೆ ಭರವಸೆ ನೀಡಿದರು.

ಕುಡಿಯುವ ನೀರಿಗೂ ಮೀಟರ್ ಅಳವಡಿಸಿ ಸರ್ಕಾರ ಜನರಿಂದ ಹಣ ಸಂಗ್ರಹಿಸುವ ತಂತ್ರ ಮಾಡುತ್ತಿದೆ. ಈಗಲೇ ಜನರು ಕಷ್ಟದಲ್ಲಿದ್ದಾರೆ. ರೈತರಿಗೆ, ಕಾರ್ಮಿಕರಿಗೆ, ಬಡವರಿಗೆ ಹೊರೆಯಾಗಲಿದೆ. ಪಂಚಾಯಿತಿಗಳಿAದ ಸಮರ್ಪಕವಾಗಿ ಕುಡಿಯುವ ನೀರಿನ ಸರಬರಾಜು ಆಗುತ್ತಿದೆ. ಮೀಟರ್ ಅಳವಡಿಸುವುದಕ್ಕೆ ಎಲ್ಲರ ವಿರೋಧವಿರುವುದರಿಂದ ಸಭೆಯಲ್ಲಿ ನಿರ್ಣಯ ಕೈಗೊಂಡು ಸಂಬAಧಪಟ್ಟವರಿಗೆ ಕಳುಹಿಸುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು. ನಿರ್ಣಯ ಮಾಡಲಾಗುವುದು ಎಂದು ನೋಡೆಲ್ ಆಧಿಕಾರಿ ಹೇಳಿದರು.

ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಕ್ರಮ ವಹಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಗ್ರಾಮೀಣ ರಸ್ತೆಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಪಿ.ಡಿ.ಒ. ಲಿಖಿತಾ ಭರವಸೆ ನೀಡಿದರು. ಕಂದಾಯ ಇಲಾಖೆಯಲ್ಲಿ ಕೆಲವರಿಂದ ಭ್ರಷ್ಟಾಚಾರ ನಡೆಯುತ್ತಿದೆ. ವೃದ್ದಾಪ್ಯ ವೇತನ, ವಿಧವಾ ವೇತನಕ್ಕೂ ಮೂರರಿಂದ ನಾಲ್ಕು ಸಾವಿರ ತೆಗೆದುಕೊಳ್ಳುತ್ತಿದ್ದಾರೆ. ಅದಕ್ಕೂ ಏಜೆಂಟ್‌ಗಳು ಇದ್ದಾರೆ ಎಂದು ಗ್ರಾಮಸ್ಥರು ದೂರಿದರು.

ಏಜೆಂಟ್‌ಗಳನ್ನು ಬಿಟ್ಟು ನೇರವಾಗಿ ಕಚೇರಿಗೆ ಬಂದು ಕೆಲಸ ಮಾಡಿಸಿಕೊಳ್ಳಿ ಎಂದು ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಅಬ್ದುಲ್ ರಜಾಕ್ ಹೇಳಿದರು. ಗ್ರಾಮಸ್ಥರ ಬೇಡಿಕೆಯಂತೆ ಗೌಡಳ್ಳಿ ಹಾಗೂ ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯಲ್ಲಿ ಒಂದು ದಿವಸ ಕಂದಾಯ ಇಲಾಖೆಯ ಸಿಬ್ಬಂದಿಗಳು ಕಾರ್ಯನಿರ್ವಹಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.

ತೋಟಗಾರಿಕೆ, ಕೃಷಿ, ಮೀನುಗಾರಿಕೆ ಇಲಾಖೆಯ ಸೌಲಭ್ಯಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಶ್ರೀಮಂತ ರೈತರಿಗೆ ಮಾತ್ರ ಸರ್ಕಾರದ ಸೌಲಭ್ಯ ಸಿಗುತ್ತಿದೆ. ಸಣ್ಣ ರೈತರಿಗೆ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಒಂದು, ಅರ್ಧ ಎಕರೆ ಇರುವ ರೈತರಿಗೂ ಸೌಲಭ್ಯಗಳು ಸಿಗಬೇಕು. ರೈತರಿಗೆ ತಾರತಮ್ಯ ಮಾಡುವುದನ್ನು ನಿಲ್ಲಿಸಬೇಕು. ನಿಯಮವನ್ನು ಸರಳೀಕರಣಗೊಳಿಸಿ ಎಂದು ರೈತರು ಒತ್ತಾಯಿಸಿದರು.

ಸಭೆಯಲ್ಲಿ ಸದಸ್ಯರಾದ ಅಜ್ಜಳ್ಳಿ ನವೀನ್, ಮಲ್ಲಿಕಾ, ವಿಶಾಲಾಕ್ಷಿ, ಸಿ.ಈ. ವೆಂಕಟೇಶ್, ಮಂಜುನಾಥ್, ನಾಗರಾಜ್, ಗಣೇಶ್ ಸೇರಿದಂತೆ ಇತರ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.