ಕೋವಿಡ್ ಮಾರ್ಗಸೂಚಿ ವಿಸ್ತರಣೆ

ಬೆಂಗಳೂರು, ಅ. ೧೦: ಬರಲಿರುವ ಸಾಲು ಸಾಲು ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕೊರೊನಾ ನಿಯಂತ್ರಿಸಲು ಸದ್ಯ ಜಾರಿಯಲ್ಲಿರುವ ಕೋವಿಡ್ ಮಾರ್ಗಸೂಚಿಯನ್ನು ತಾ. ೨೫ ರವರೆಗೂ ವಿಸ್ತರಿಸಿ ಆದೇಶ ಹೊರಡಿಸಿದೆ. ಈ ಕುರಿತು ರಾಜ್ಯ ಸರ್ಕಾರ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆ ಬಹುತೇಕ ನಿರ್ಬಂಧಗಳನ್ನು ಸಡಿಲಗೊಳಿಸಿ ಮಾರ್ಗಸೂಚಿ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೊಟೇಲ್, ರೆಸ್ಟೋರೆಂಟ್, ಚಿತ್ರಮಂದಿರ, ರಂಗಮAದಿರ, ಪಬ್ ಸೇರಿ ಎಲ್ಲೆಡೆ ಶೇ. ೧೦೦ರಷ್ಟು ಅವಕಾಶ ಸೇರಿ ಎಲ್ಲವೂ ವಿಸ್ತರಣೆಯಾಗಲಿದೆ. ಹೀಗಾಗಿ ರಾಜ್ಯಾದ್ಯಂತ ತಾ. ೨೫ರ ಬೆಳಿಗ್ಗೆ ೬ ಗಂಟೆವರೆಗೆ ಹಾಲಿ ಮಾರ್ಗಸೂಚಿಗಳೇ ಅನ್ವಯವಾಗಲಿವೆ. ಇದರ ಪ್ರಕಾರ ೫ನೇ ತರಗತಿ ಒಳಗಿನ ವಿದ್ಯಾರ್ಥಿಗಳಿಗೆ ಹೊರತುಪಡಿಸಿ ಉಳಿದೆಲ್ಲಾ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಮುಂದುವರೆಯಲಿವೆ. ಅದೇ ರೀತಿ ಧಾರ್ಮಿಕ ಹಾಗೂ ರಾಜಕೀಯ ಸಮಾವೇಶ, ಜಾತ್ರೆ, ಧಾರ್ಮಿಕ ಉತ್ಸವ, ಮೆರವಣಿಗೆಗಳಿಗೆ ನಿಷೇಧ ಹೇರಲಾಗಿದೆ. ಈ ಹಿನ್ನೆಲೆ ಈದ್ ಮಿಲಾದ್ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ ವೇಳೆಯೂ ಸಾರ್ವಜನಿಕ ಮೆರವಣಿಗೆಗೆ ಅವಕಾಶವಿಲ್ಲ. ಜೊತೆಗೆ ನಿರ್ದಿಷ್ಟ ಸಂಖ್ಯೆಯಲ್ಲಿ ಮಾತ್ರ ಜನರು ಭಾಗವಹಿಸಿ ಪ್ರಾರ್ಥನೆ ಅಥವಾ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.ಶಾಲಾ-ಕಾಲೇಜು, ವೈದ್ಯಕೀಯ ಕಾಲೇಜು ಮತ್ತು ಸಂಬAಧಿತ ಸಂಸ್ಥೆಗಳ ಪುನರ್ ಆರಂಭ, ಅಗತ್ಯವಿದ್ದರೆ ಹೆಚ್ಚುವರಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಜಲಕ್ರೀಡೆಗಳಿಗೆ ನೀಡಿರುವ ಅನುಮತಿ ಹಾಗೂ ವಸ್ತು ಪ್ರದರ್ಶನ, ಸಿನಿಮಾ ಮಂದಿರ, ಪಬ್‌ಗಳಿಗೆ ನೀಡಿರುವ ಅವಕಾಶ ಸೇರಿದಂತೆ ಎಲ್ಲಾ ಆದೇಶಗಳೂ ಅ.೨೫ರವರೆಗೂ ವಿಸ್ತರಿಸಲಾಗಿದೆ ಎಂದು ಕಂದಾಯ ಇಲಾಖೆ ಆದೇಶದಲ್ಲಿ ತಿಳಿಸಿದೆ.

ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ರಿತು ರಾಜ್

ಬೆಂಗಳೂರು, ಅ. ೧೦: ಅಲಹಾಬಾದ್ ಹೈಕೋರ್ಟ್ನ ಹಿರಿಯ ನ್ಯಾಯಾಧೀಶ, ಜಸ್ಟೀಸ್ ರಿತು ರಾಜ್ ಅವಸ್ಥಿ ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ರಾಷ್ಟçಪತಿಗಳು ಅಂಕಿತ ಹಾಕಿದ ನಂತರ ಕಾನೂನು ಮತ್ತು ನ್ಯಾಯ ಸಚಿವಾಲಯ ನಿನ್ನೆ ಅಧಿಸೂಚನೆ ಹೊರಡಿಸಿದೆ. ೧೯೬೦ರ ಜುಲೈ ೩ರಂದು ಜನಿಸಿದ ಜಸ್ಟೀಸ್ ಅವಸ್ಥಿ ಕಾನೂನು ಪದವಿಯನ್ನು ೧೯೮೬ರಲ್ಲಿ ಲಕ್ನೊ ವಿಶ್ವವಿದ್ಯಾಲಯದಿಂದ ಮುಗಿಸಿದ್ದರು. ೧೯೮೭ರಲ್ಲಿ ಅಡ್ವೊಕೇಟ್ ಆಗಿ ದಾಖಲಾತಿ ಮಾಡಿಕೊಂಡ ನಂತರ ಸಿವಿಲ್, ಸರ್ವಿಸ್ ಮತ್ತು ಶಿಕ್ಷಣ ವಿಷಯಗಳಲ್ಲಿ ಅಲಹಾಬಾದ್ ಹೈಕೋರ್ಟ್ನ ಲಕ್ನೊ ಪೀಠದ ಮೂಲಕ ವ್ಯಾಜ್ಯಗಳ ಅಭ್ಯಾಸ ನಡೆಸುತ್ತಿದ್ದರು.

ಇಂದು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶ

ಬೆAಗಳೂರು, ಅ. ೧೦: ತಾ. ೧೧ ರಂದು (ಇಂದು) ೨೦೨೧ರ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ನೃಪತುಂಗ ರಸ್ತೆಯಲ್ಲಿರುವ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಫಲಿತಾಂಶವನ್ನು ಪ್ರಕಟಿಸಲಿದ್ದಾರೆ. ಸೆಪ್ಟಂಬರ್ ೨೭ ಹಾಗೂ ೨೯ ರಂದು ಎರಡು ದಿನ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ನಡೆದಿತ್ತು. ಸರಳೀಕೃತ ಮಾದರಿಯಲ್ಲಿ ಒಂದು ದಿನ ಕೋರ್ ವಿಷಯಗಳಿಗೆ ಹಾಗೂ ಮತ್ತೊಂದು ದಿನ ಭಾಷಾ ವಿಷಯಕ್ಕೆ ಪರೀಕ್ಷೆ ನಡೆದಿತ್ತು. ಪೂರಕ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳಿತ್ತು. ಪ್ರತಿ ವಿಷಯಕ್ಕೆ ೪೦ ಅಂಕಗಳಿಗೆ ಸೀಮಿತಗೊಳಿಸಿ ಪರೀಕ್ಷೆ ನಡೆಸಲಾಗಿತ್ತು.

ವಿಮಾನ ಪತನ-೧೬ ಮಂದಿಯ ಸಾವಿನ ಶಂಕೆ

ಮಾಸ್ಕೋ, ಅ. ೧೦: ರಷ್ಯಾದಲ್ಲಿ ೨೩ ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದ್ದು, ಕನಿಷ್ಟ ೧೬ ಮಂದಿ ಸಾವನ್ನಪ್ಪಿರುವ ಶಂಕೆ ಇದೆ ಎನ್ನಲಾಗಿದೆ. ರಷ್ಯಾದ ಟಾಟರ್ಸ್ತಾನ್ ಪ್ರಾಂತ್ಯದ ಯಮನ್ಝೆಲಿನ್ಸ್ಕ್ನಲ್ಲಿ ಈ ಘಟನೆ ನಡೆದಿದ್ದು, ೨೧ ಮಂದಿ ಪ್ಯಾರಾಶೂಟ್ ಡೈವರ್‌ಗಳು ಸೇರಿದಂತೆ ಒಟ್ಟು ೨೩ ಮಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ರಷ್ಯಾದ ಟಾಸ್ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ೨೩ ಮಂದಿಯ ಪೈಕಿ ೭ ಮಂದಿಯನ್ನು ರಕ್ಷಿಸಲಾಗಿದೆ.

ಮೋದಿ ಮೌನದ ಬಗ್ಗೆ ರಾಹುಲ್ ಪ್ರಶ್ನೆ

ನವದೆಹಲಿ, ಅ. ೧೦: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಲಖೀಂಪುರ್ ಖೇರಿಯಲ್ಲಿ ಬಿಜೆಪಿ ಕಾರ್ಯಕರ್ತರು, ರೈತರ ಹತ್ಯೆ, ಹಣದುಬ್ಬರ ಹಾಗೂ ತೈಲ ಬೆಲೆ ಏರಿಕೆ, ನಿರುದ್ಯೋಗ ಬಗ್ಗೆ ಪ್ರಧಾನಿ ಮಾತನಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಹಣದುಬ್ಬರ, ತೈಲ ಬೆಲೆ, ನಿರುದ್ಯೋಗ ಮತ್ತು ರೈತರು, ಬಿಜೆಪಿ ಹತ್ಯೆ ಕುರಿತು ಮೌನವಾಗಿರುವ ಪ್ರಧಾನಿ, ಕ್ಯಾಮೆರಾ ಮತ್ತು ಫೋಟೋ ಆಪ್‌ಗಳ ಕೊರತೆ, ನಿಜವಾದ ಟೀಕೆ, ಸ್ನೇಹಿತರ ಪ್ರಶ್ನೆಗಳಿಗೆ ವೈಲೆಂಟ್ ಆಗುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಲಖೀಂಪುರ್ ಖೇರಿಯಲ್ಲಿ ತಾ. ೩ ರಂದು ಕೇಂದ್ರ ಗೃಹ ವ್ಯವಹಾರಗಳ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ರೈತರ ಮೇಲೆ ಕಾರು ಹರಿಸಿದ್ದಾಗಿ ರೈತರು ಆರೋಪಿಸುತ್ತಿದ್ದಾರೆ. ಆದಾಗ್ಯೂ, ರೈತರ ಆರೋಪವನ್ನು ತಳ್ಳಿ ಹಾಕಿರುವ ಆಶಿಶ್ ಮಿಶ್ರಾ, ತಾನು ಅಲ್ಲಿ ಇರಲಿಲ್ಲ ಎಂದು ಹೇಳುತ್ತಿದ್ದಾರೆ.

೯೫ ಕೋಟಿ ಡೋಸ್ ಕೋವಿಡ್ ಲಸಿಕೆ

ನವದೆಹಲಿ, ಅ. ೧೦: ಕೊರೊನಾ ಲಸಿಕೆ ನೀಡಿಕೆ ಅಭಿಯಾನದಲ್ಲಿ ದೇಶ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಈವರೆಗೂ ೯೫ ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯಾ ಭಾನುವಾರ ತಿಳಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಮಾಂಡವೀಯಾ, ದೇಶದಲ್ಲಿ ಈವರೆಗೂ ೯೫ ಕೋಟಿ ಲಸಿಕೆ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಕೋವಿಡ್ ನಿರ್ವಹಣೆ ಬಗ್ಗೆ ಕೇಂದ್ರ ಸಚಿವರ ಮೆಚ್ಚುಗೆ

ಬೆಂಗಳೂರು, ಅ. ೧೦: ರಾಜ್ಯದಲ್ಲಿನ ಕೋವಿಡ್ ೧೯ ಸೋಂಕಿನ ನಿರ್ವಹಣೆ ಹಾಗೂ ಲಸಿಕೆ ಕಾರ್ಯಕ್ರಮದ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್‌ಸುಖ್ ಎಲ್. ಮಾಂಡವೀಯ ಅವರು ಮೆಚ್ಚುಗೆ ವ್ಯಕ್ತಪಡಿಸಿ, ಮುಖ್ಯಮಂತ್ರಿಯವರನ್ನು ಅಭಿನಂದಿಸಿದರು. ಅವರು ಇಂದು ನಗರದ ಎಸ್.ಡಿ.ಎಸ್., ಟಿ.ಆರ್.ಸಿ. ಮತ್ತು ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯ ಆವರಣದಲ್ಲಿ ಸರ್ಕಾರದ ಮತ್ತು ಸಿ.ಎಸ್.ಆರ್. ಅನುದಾನದಡಿಯಲ್ಲಿ ನಿರ್ಮಿಸಲಾಗಿರುವ ಕೋವಿಡ್ ಫೀಲ್ಡ್ ಆಸ್ಪತ್ರೆಯನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು. ರಾಜ್ಯದ ಲಸಿಕೆ ಕಾರ್ಯಕ್ರಮದ ಕುರಿತು ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿರುವ ಕುರಿತು ಅವರು ತಮ್ಮ ಅನುಭವವನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ರಾಜ್ಯದಲ್ಲಿ ಶೇ. ೮೩ ರಷ್ಟು ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, ಸೆಪ್ಟೆಂಬರ್ ೧೭ ರಂದು ನಡೆಸಿದ ವಿಶೇಷ ಅಭಿಯಾನದಲ್ಲಿ ದೇಶದಲ್ಲಿ ಒಟ್ಟು ೨.೫ ಕೋಟಿ ಡೋಸ್ ಲಸಿಕೆ ನೀಡಲಾಯಿತು. ಇದರಲ್ಲಿ ಕರ್ನಾಟಕ ರಾಜ್ಯ ಅತಿ ಹೆಚ್ಚು ಲಸಿಕೆ ನೀಡಿ ದಾಖಲೆ ನಿರ್ಮಿಸಿದ್ದು, ಇದಕ್ಕಾಗಿ ಕರ್ನಾಟಕ ಸರ್ಕಾರ ಹಾಗೂ ರಾಜ್ಯದ ಜನತೆಯನ್ನು ಸಚಿವರು ಅಭಿನಂದಿಸಿದರು.

ಕಳ್ಳನನ್ನು ಹಿಡಿದ ಆಟೋ ಚಾಲಕ

ಬೆಂಗಳೂರು, ಅ. ೧೦: ದಾರಿಹೋಕ ಮಹಿಳೆಯ ಚಿನ್ನದ ಸರ ಕಳವು ಮಾಡಿ ಪರಾರಿಯಾಗುತ್ತಿದ್ದ ಕಳ್ಳನೋರ್ವನನ್ನು ಸಿನಿಮೀಯ ರೀತಿಯಲ್ಲಿ ಆಟೋ ಚಾಲಕನೋರ್ವ ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದ ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದಾಬಸಪೇಟೆ ನಿವಾಸಿ ಕೇಶವಮೂರ್ತಿ (೩೧) ಬಂಧಿತ ಆರೋಪಿ. ಬಂಧಿತನಿAದ ರೂ. ೪೦ ಸಾವಿರ ಮೌಲ್ಯದ ೯.೫ ಗ್ರಾಂ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಟೋ ಚಾಲಕ ರುದ್ರೇಶ್ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.