ನಾಪೋಕ್ಲು, ಅ. ೧೦: ಕುಂಜಿಲ ಗ್ರಾಮದ ಕೊಳಕೇರಿ-ನಾಲ್ಕೇರಿ ಶ್ರೀ ಭಗವತಿ ದೇವಳ ಅಭಿವೃದ್ಧಿ ಸಮಿತಿಯಲ್ಲಿ ೨೫ ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಮಾಜಿ ಅಧ್ಯಕ್ಷ ಕಲ್ಯಾಟಂಡ ಮುತ್ತಪ್ಪ ಅವರನ್ನು ದೇವಳ ಸಮಿತಿ, ತಕ್ಕಮುಖ್ಯಸ್ಥರು ಹಾಗೂ ಗ್ರಾಮಸ್ಥರ ವತಿಯಿಂದ ಸನ್ಮಾನಿಸಲಾಯಿತು.
ದೇವಳ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ನೆರವೇರಿಸಿ ಮಾತನಾಡಿದ ದೇವಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಾಚಮಂಡ ರಾಜಾ ಪೂವಣ್ಣ, ಕಾಡುಪಾಲಾಗಿದ್ದ ದೇವಳವನ್ನು ಇವರ ಅಧ್ಯಕ್ಷತೆಯಲ್ಲಿ ಅಭಿವೃದ್ಧಿಪಡಿಸಿ ಜೀರ್ಣೋದ್ಧಾರ ಕಾರ್ಯಕ್ಕೆ ಪದಾಧಿಕಾರಿಗಳೊಂದಿಗೆ ಶ್ರಮಿಸಿದ್ದಾರೆ. ಇವರ ೨೫ ವರ್ಷಗಳ ಸೇವೆ ಅವಿಸ್ಮರಣೀಯ. ಮುಂದಕ್ಕೂ ಇವರ ಸಲಹೆ ಮತ್ತು ಸೂಚನೆಗಳನ್ನು ನೂತನ ಆಡಳಿತ ಮಂಡಳಿಗೆ ನೀಡಿ ಸಹಕಾರ ನೀಡಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಲ್ಯಾಟಂಡ ಮುತ್ತಪ್ಪ, ಗ್ರಾಮಗಳಲ್ಲಿರುವ ದೈವಿಕ ನೆಲೆಗಳು, ದೇವಳಗಳು ಗ್ರಾಮದ ಒಗ್ಗಟ್ಟಿಗೆ ಹಾಗೂ ನಂಬಿಕೆಗೆ ಮೂಲ ಕಾರಣವಾಗಿದೆ. ಎಲ್ಲರೂ ದೇವಳ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭ ದೇವಳ ಸಮಿತಿ ಪದಾಧಿಕಾರಿಗಳು, ದೇವಳದ ತಕ್ಕಮುಖ್ಯಸ್ಥರು, ಗ್ರಾಮಸ್ಥರು ಹಾಜರಿದ್ದರು.