ಪೊನ್ನಂಪೇಟೆ, ಅ೧೧: ಕಳೆದ ರಾತ್ರಿ ಸುರಿದ ಭಾರೀ ಮಳೆ ಮತ್ತು ಗಾಳಿಗೆ ಸಮೀಪ ವಿದ್ದ ಮರಬಿದ್ದು ೨ ವಾಸದ ಮನೆಗಳಿಗೆ ಹಾನಿ ಸಂಭವಿಸಿರುವ ಘಟನೆ ಮಾಯಮುಡಿಯಲ್ಲಿ ಸಂಭವಿಸಿದೆ.
ಮಾಯಮುಡಿ ಸಮೀಪದ ರಾಜ ಕಾಲೋನಿಯ ನಿವಾಸಿ ನಿವಾಸಿಗಳಾದ ಸೌಜತ್ ಮತ್ತು ರಮ್ಲಾ ಅವರು ವಾಸಿಸುತ್ತಿದ್ದ ಮನೆಗಳಿಗೆ ಹಾನಿಯುಂಟಾಗಿದ್ದು, ಮರ ಬಿದ್ದ ಪರಿಣಾಮ ಮೇಲ್ಛಾವಣಿ ತೀವ್ರವಾಗಿ ಜಖಂಗೊAಡಿದೆ. ಭಾನುವಾರ ರಾತ್ರಿ ದಿಡೀರನೆ ಆರಂಭಗೊAಡ ಮಳೆಯಿಂದಾಗಿ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಬಗ್ಗೆ ಕಂದಾಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಅವರಿಂದ ಸೂಕ್ತ ಸ್ಪಂದನ ದೊರೆಯುತ್ತಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಲೆಕ್ಕಿಗರು ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಬೇಜವಾಬ್ದಾರಿಯಾಗಿ ಹೇಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಸಂತ್ರಸ್ತರು, ನಾವೆಲ್ಲಾ ಬಿಪಿಎಲ್ ಪಡಿತರರಾಗಿದ್ದು. ಬಡತನದ ಮಧ್ಯೆ ಬದುಕು ಸಾಗಿಸುತ್ತಿದ್ದೇವೆ ಈ ಸಂದರ್ಭದಲ್ಲಿ ವಾಸದ ಮನೆಗೆ ಹಾನಿ ಉಂಟಾಗಿರುವುದು ಮತ್ತಷ್ಟು ಸಂಕಷ್ಟ ತಂದಿದೆ. ಆದರೆ ಇದಕ್ಕೆ ಸ್ಪಂದಿಸಬೇಕಾದ ಕಂದಾಯ ಇಲಾಖೆ ಪರಿಹಾರ ನೀಡಲು ಮುಂದಾಗದಿರುವುದು ಅನ್ಯಾಯದ ಪರಮಾವಧಿ ಎಂದು ಅವರು ಕಿಡಿಕಾರಿದ್ದಾರೆ. ಸ್ಥಳಕ್ಕೆ ಮಾಯಮುಡಿ ಗ್ರಾಮ ಪಂಚಾಯಿತಿ ಸದಸ್ಯ ಟಾಟು ಮೊಣ್ಣಪ್ಪ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರೀಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.