ವೀರಾಜಪೇಟೆ, ಅ. ೧೦: ಮನೆಗೆ ಕನ್ನ ಹಾಕಿದ ಆರೋಪಿಯನ್ನು ಬಂಧಿಸುವಲ್ಲಿ ವೀರಾಜಪೇಟೆ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಕಲ್ಲುಬಾಣೆಯ ನಿವಾಸಿ ಕೂಲಿ ಕಾರ್ಮಿಕ ಕೆ.ಎಸ್ ನಿಖಿಲ್ (೨೨) ಬಂಧಿತ ಆರೋಪಿ.

ಪಟ್ಟಣದ ಸಿಲ್ವ ನಗರದ ನಿವಾಸಿ ಸುಬ್ಬಯ್ಯ ಎಂಬವರ ಬಾಡಿಗೆ ಮನೆಯಲ್ಲಿ ವಾಸವಿದ್ದ ಕುಮಾರ್ ಎಂಬವರು ತಾ.೬ ರಂದು ರಂದು ಕುಟುಂಬ ಸಮೇತ ಮಹಾಲಯ ಅಮಾವಾಸ್ಯೆ ಹಬ್ಬ ಆಚರಿಸಲು ತಮ್ಮ ಹುಟ್ಟೂರು ಹೊಳೆನರಸೀಪುರಕ್ಕೆ ತೆರಳಿದ್ದರು. ಅಂದು ಮನೆಯಲ್ಲಿ ಯಾರು ಇಲ್ಲದಿರುವುದು ಖಾತ್ರಿ ಪಡಿಸಿಕೊಂಡ ಚೋರ ರಾತ್ರಿ ೧೧ ಗಂಟೆ ಸುಮಾರಿಗೆ ಮನೆಯ ಹಿಂಬದಿ ಬಾಗಿಲನ್ನು ಮುರಿದು ಮನೆಗೆ ನುಗ್ಗಿ ನಂತರದಲ್ಲಿ ಮನೆಯೊಳಗಿದ್ದ ರೂ. ೧೫ ಸಾವಿರ ಬೆಲೆ ಬಾಳುವ ೧೪ ಇಂಚಿನ ಟಿ.ವಿ ಮತ್ತು ಮನೆಯ ಕಾಪಟಿನಲ್ಲಿದ್ದ ೧,೪೦೦ ರೂ ನಗದು ಅಪಹರಿಸಿ ಪರಾರಿಯಾಗಿದ್ದಾನೆ. ಮನೆಯಿಂದ ಊರಿಗೆ ತೆರಳಿದ್ದ ಮನೆಯ ಮಂದಿ ತಾ.೭ ರಂದು ಆಗಮಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಕುಮಾರ್ ತಕ್ಷಣವೇ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಸ್ಥಳಕ್ಕೆ ತೆರಳಿದ ಪೊಲೀಸರು ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ ಮುಂದಿನ ಕ್ರಮಕೈಗೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದರು.

ತಾ. ೧೦ ರಂದು ಬೆಳಿಗ್ಗೆ ೧೧ ಗಂಟೆಯ ವೇಳೆ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಆರೋಪಿಯು ಪೊಲೀಸರ ಬಲೆಗೆ ಬಿದ್ದಿದ್ದು, ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿತನಿಂದ ಕಳ್ಳತನ ಮಾಡಿದ ಟಿ.ವಿ ವಶಕ್ಕೆ ಪಡೆದುಕೊಂಡು ಅರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಮಾರ್ಗದರ್ಶನ, ವೀರಾಜಪೇಟೆ ಉಪವಿಭಾಗ ಡಿ.ವೈ.ಎಸ್ಪಿ ಜಯಕುಮಾರ್ ನಿರ್ದೇಶನದಲ್ಲಿ, ವೀರಾಜಪೇಟೆ ವೃತ್ತ ನಿರೀಕ್ಷಕÀ ಬಿ.ಎಸ್. ಶ್ರೀಧರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೀರಾಜಪೇಟೆ ನಗರ ಠಾಣೆಯ ಅಪರಾಧ ವಿಭಾಗದ ಉಪನಿರೀಕ್ಷಕÀ ಹೆಚ್.ಎಸ್. ಬೋಜಪ್ಪ, ನಗರ ಠಾಣಾಧಿಕಾರಿ ಜಗದೀಶ್ ಧೂಳ ಶೆಟ್ಟಿ, ಜಿಲ್ಲಾ ಬೆರಳಚ್ಚು ವಿಭಾಗದ ಜಯಕುಮಾರ್, ಸಿಬ್ಬಂದಿಗಳಾದ ಪಿ.ಯು.ಮುನೀರ್, ರಜನ್ ಕುಮಾರ್, ಮಧು ಟಿ.ಟಿ. ಸಿಬ್ಬಂದಿಗಳಾದ ಗೀತಾ, ಮೋಹನ್ ಟಿ.ಕೆ.ಸಾಗರ್, ಮಂಜುನಾಥ್ ಬಿ.ವಿ. ಮತ್ತು ಮಹಂತೇಶ್ ಎಂ.ಪಿ. ಭಾಗವಹಿಸಿದರು.

-ಕಿಶೋರ್ ಕುಮಾರ್ ಶೆಟ್ಟಿ