ನಾಪೋಕ್ಲು, ಅ. ೧೦: ಹೊರ ರಾಜ್ಯಗಳಿಂದ ಕಾಫಿ ತೋಟಗಳಲ್ಲಿ ದುಡಿಯಲು ಬರುವ ಕಾರ್ಮಿಕರಿಗೆ ನಿಗದಿತ ವೇತನ ನೀಡಲು ಕಾಫಿ ಬೆಳೆಗಾರರ ಒಕ್ಕೂಟದಿಂದ ತೀರ್ಮಾನಿಸಲಾಯಿತು. ಬಲ್ಲಮಾವಟಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ಗ್ರಾಮಗಳಾದ ಬಲ್ಲಮಾವಟಿ, ಪೇರೂರು, ನೆಲಜಿ, ದೊಡ್ಡಪುಲಿಕೋಟು ಗ್ರಾಮದ ಬೆಳೆಗಾರರು ಸಂಘಟಿತರಾಗಿ ಬಲ್ಲಮಾವಟಿ ದವಸ ಭಂಡಾರ ಕಟ್ಟಡದಲ್ಲಿ ಸಭೆ ನಡೆಸಿ ಕಾಫಿ ತೋಟದ ಕಾರ್ಮಿಕರ ವೇತನದ ಬಗ್ಗೆ ಚರ್ಚಿಸಿದರು.
ಕಾರ್ಮಿಕರಿಗೆ ದಿನವೊಂದಕ್ಕೆ ರೂ. ೨೫೦ ವೇತನ ಮತ್ತು ಸಮಯ ಬೆಳಿಗ್ಗೆ ೮ ರಿಂದ ಸಂಜೆ ೪.೩೦ ರ ತನಕ ಕೆಲಸ ನಿರ್ವಹಿಸುವಂತೆಯೂ ಮಧ್ಯಾಹ್ನ ೧ ಗಂಟೆಯ ಊಟದ ಅವದಿ ನೀಡುವಂತೆಯೂ ಅಸ್ಸಾಂ, ಮದ್ಯಪ್ರದೇಶ, ಉತ್ತರಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳದ ಕಾರ್ಮಿಕರಿಗೆ ಈ ವೇತನ ಹಾಗೂ ಸಮಯ ನಿಗದಿಪಡಿಸಿ ನಿರ್ಣಯ ಕೈಗೊಳ್ಳಲಾಯಿತು. ಎಲ್ಲಾ ಬೆಳೆಗಾರರು ಇದನ್ನು ಪಾಲಿಸುವಂತೆ ತಿಳಿಸಲಾಯಿತು.
ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಣವಟ್ಟಿರ ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ನಾಪೋಕ್ಲು ಹೋಬಳಿ ಸಮಿತಿಗೆ ಬಲ್ಲಮಾವಟಿ ಗ್ರಾಮದಿಂದ ನುಚ್ಚುಮಣಿಯಂಡ ಚಿಣ್ಣಪ್ಪ, ತಾಪಂಡ ವರುಣ್ ಸುಬ್ಬಯ್ಯ, ಮಾದೆಯಂಡ ಕುಟ್ಟಪ್ಪ, ದೊಡ್ಡಪುಲಿಕೋಟು ಗ್ರಾಮದಿಂದ ಕರವಂಡ ಸೋಮಣ್ಣ, ಮುಕ್ಕಾಟಿರ ಜಾಲಿ ಚಂಗಪ್ಪ, ಮಾದೆಯಂಡ ಕುಟ್ಟಪ್ಪ ಹಾಗೂ ನೆಲಜಿ ಗ್ರಾಮದಿಂದ ಮುಕ್ಕಾಟಿರ ವಿನಯ್ ಅವರನ್ನು ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. - ದುಗ್ಗಳ