ಮಡಿಕೇರಿ, ಅ. ೧೦ : ಪ್ರಸ್ತುತ ಕಾಲಘಟ್ಟದಲ್ಲಿ, ಜಾಗತೀಕರಣ ವ್ಯವಸ್ಥೆಯಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹೆಚ್ಚಾಗುತ್ತಿವೆ. ಬಣ್ಣ ಬಣ್ಣದ, ಕಣ್ಣಿಗೆ ಆಕರ್ಷಿಸುವ ಬಗೆಬಗೆಯ ಗೃಹಬಳಕೆಯ ವಸ್ತುಗಳು ‘ಹೈಟೆಕ್’ ಆಗಿ ಮಾರ್ಪಟ್ಟಿವೆ. ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಮಣ್ಣಿನಲ್ಲಿ ತಯಾರಿಸಿದ ದಿನಬಳಕೆ ವಸ್ತುಗಳು ಇದೀಗ ಮಾಯವಾಗಿವೆ. ಕೊಡಗು ಜಿಲ್ಲೆಯಲ್ಲಿಯೂ ಕೂಡ ಕುಂಬಾರಿಕೆ ವಿನಾಶದತ್ತ ಹೆಜ್ಜೆಹಾಕುತ್ತಿದೆ.
ಹೌದು..ಮಣ್ಣಿನಲ್ಲಿ ತಯಾರಿಸಿದ ಮಡಿಕೆ, ಕುಡಿಕೆ, ಪಾತ್ರೆಗಳು, ಅಂದದ ಕಲಾಕೃತಿಗಳು, ಅಣತೆ, ಹೂಕುಂಡಗಳು ಹೊಸತನದ ಭರಾಟೆಯಲ್ಲಿ ಕಳೆದುಹೋಗಿವೆ. ಪ್ಲಾಸ್ಟಿಕ್‌ನಿಂದ ತಯಾರಾದ ಕಲಾಕೃತಿ, ಅಣತೆ, ಹೂಕುಂಡ, ಸ್ಟೀಲ್ ಪಾತ್ರೆಗಳು ಮನೆಗಳನ್ನು ಆವರಿಸಿಕೊಂಡಿವೆ. ಆರೋಗ್ಯಕ್ಕೆ ಪೂರಕವಾಗಿದ್ದ ಮಡಿಕೆಗಳು ಮಾರುಕಟ್ಟೆಯಲ್ಲಿ ದೂಳು ಹಿಡಿಯುತ್ತಿವೆೆ. ಅದಲ್ಲದೆ ಇಂದಿನ ಯುವಜನಾಂಗ ಕುಂಬಾರಿಕೆ ವೃತ್ತಿಯತ್ತÀ ಮುಖ ಮಾಡದಿರುವುದು ಜನಪದೀಯ ಕೌಶಲ್ಯ ನಶಿಸಲು ಕಾರಣವಾಗಿದೆ.
ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಮಣ್ಣಿನಿಂದ ವಸ್ತುಗಳ ತಯಾರಿಸುವವರ ಸಂಖ್ಯೆ ಕ್ಷೀಣಿಸಿದೆ. ಜಿಲ್ಲೆಯಲ್ಲಿ ೩,೫೦೦ ರಿಂದ ೪ ಸಾವಿರ ಕುಂಬಾರ ಸಮುದಾಯದವರಿದ್ದಾರೆ. ಮೊದಲೆಲ್ಲ ಹಲವರು ಕುಂಬಾರಿಕೆಯ ಮೂಲಕ ಬದುಕು ಕಟ್ಟಿಕೊಂಡಿದ್ದರು. ದಕ್ಷಿಣ ಕೊಡಗಿನ ಮಾಯಮುಡಿ ಸಮೀಪದ ಮಡಿಕೆಬೀಡು ಗ್ರಾಮದಲ್ಲಿ ಹಲವರು ಮಣ್ಣಿನಲ್ಲಿ ವಿವಿಧ ಸಾಮಗ್ರಿಗಳನ್ನು ತಯಾರಿಸುತ್ತಿದ್ದರು. ಹೆಸರಿಗೆ ತಕ್ಕಂತೆ ಮಡಿಕೆಯ ಬೀಡಾಗಿದ್ದ ಗ್ರಾಮದಲ್ಲಿ ಮಣ್ಣಿನ ವಸ್ತು ತಯಾರಿಕಾ ಘಟಕ ಕೂಡ ಕಾರ್ಯನಿರ್ವಹಿಸುತಿತ್ತು. ಇಲ್ಲಿ ಸುಂದರವಾದ ಅಲಂಕಾರಿಕ ವಸ್ತುಗಳು, ಹೂಕುಂಡಗಳು, ಪಾತ್ರೆಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಗುಣಮಟ್ಟದಲ್ಲಿ ತಯಾರಿಕೆ ಮಾಡಿ ವಿವಿಧೆಡೆಗೆ ರಫ್ತು ಮಾಡಲಾಗುತಿತ್ತು. ಹಲವರು ಇಲ್ಲಿ ಬದುಕನ್ನು ಕಟ್ಟಿಕೊಂಡಿದ್ದರು.