ಸಿದ್ದಾಪುರ, ಅ. ೧೦: ದಲಿತ ಸಂಘರ್ಷ ಸಮಿತಿಗಳ ಮೂಲಕ ಅಂಬೇಡ್ಕರ್ಅವರ ಸಂದೇಶಗಳನ್ನು ಮನೆ ಮನೆಗಳಿಗೆ ಮುಟ್ಟಿಸಬೇಕು ಎಂದು ಮಾಜಿ ಸಂಸದ ಧ್ರುವ ನಾರಾಯಣ್ ಕರೆ ನೀಡಿದರು. ಸಿದ್ದಾಪುರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ) ಸಿದ್ದಾಪುರ ಸಮಿತಿಯಿಂದ ಕೊರೊನಾ ವಾರಿಯರ್ಸ್ಗಳಿಗೆ ಏರ್ಪಡಿಸಲಾದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿಯಾಗಿದ್ದು, ಅವರು ಶೋಷಿತ ಸಮಾಜದವರ ಪರ ಹೋರಾಟ ಮಾಡಿದಂತಹ ಮಹಾನ್ ವ್ಯಕ್ತಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸಂದೇಶ ತತ್ವ-ಸಿದ್ಧಾಂತಗಳನ್ನು ದ.ಸಂ.ಸ. ಸಂಘಟನೆಗಳ ಮುಖಾಂತರ ಮನೆ ಮನೆಗಳಿಗೆ ತಲುಪಿಸುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು. ೧೯೮೦ರಲ್ಲಿ ದಲಿತ ಸಂಘರ್ಷ ಸಂಘಟನೆಯು ಒಗ್ಗಟ್ಟಾಗಿತ್ತು. ಅಂದಿನ ಕಾಲದಲ್ಲಿ ಸಂಘಟನೆಯಲ್ಲಿ ಚಿಂತಕರು ಇದ್ದರು. ಸರ್ಕಾರದ ಜನವಿರೋಧಿ ನಡೆ ವಿರುದ್ಧ ಹೋರಾಟಗಳನ್ನು ಮಾಡುತ್ತಾ, ಸರ್ಕಾರ ಸರಿದಾರಿಯಲ್ಲಿ ಹೋಗುವಂತೆ ನೋಡಿಕೊಳ್ಳುತ್ತಿತ್ತು. ಆದರೆ, ಇದೀಗ ಸಂಘಟನೆಯ ನಡುವೆ ಬಣಗಳಾಗಿ ವಿಭಜನೆಯಾಗಿ ಹಿನ್ನಡೆಯಾಗುತ್ತಿದೆ ಎಂದರು. ಸಂಘಟನೆಗಳಲ್ಲಿ ಬಣಗಳಾಗ ಬಾರದೆಂದರಲ್ಲದೆ, ಜಿಲ್ಲೆಯ ದ.ಸಂ.ಸ. ಸಂಘಟನೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ಪದವಿ ವ್ಯಾಸಂಗ ಮಾಡುವ ಹೆಣ್ಣು ಮಕ್ಕಳಿಗೆ ಸೇರಿದಂತೆ ಮಕ್ಕಳ ವ್ಯಾಸಂಗಕ್ಕೆ ವಸತಿ ಶಾಲೆಗಳನ್ನು ಪ್ರಾರಂಭಿಸಲು ಹೋರಾಟ ಮಾಡಬೇಕೆಂದರು.
ರಾಜ್ಯ ಕಾಂಗ್ರೆಸ್ನ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಎಸ್. ಪೊನ್ನಣ್ಣ ಮಾತನಾಡಿ, ಡಾ. ಅಂಬೇಡ್ಕರ್ರವರು ಶಿಕ್ಷಣಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿದ್ದರು. ಅವರ ತತ್ವ - ಸಿದ್ಧಾಂತ ಶಿಸ್ತನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಮುಖ್ಯವಾಹಿನಿಗೆ ಬರಬೇಕೆಂದು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಆಸ್ತಿಗಿಂತಲೂ ವಿದ್ಯೆ ಮುಖ್ಯ. ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ದ.ಸಂ.ಸ. ಸಂಘಟನೆಯು ಜಾತ್ಯತೀತ ನಿಲುವನ್ನು ಹೊಂದಿ ರಾಜಕೀಯ ರಹಿತವಾಗಿ ಹೋರಾಟ ಮಾಡಬೇಕೆಂದರು.
ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಹೆಚ್.ಎಲ್. ದಿವಾಕರ್ ಮಾತನಾಡಿ, ೧೯೭೫ರಲ್ಲಿ ಜಿಲ್ಲೆಯಲ್ಲಿ ದ.ಸಂ.ಸ. ಸಂಘಟನೆ ಪ್ರಾರಂಭವಾಗಿದ್ದು, ಸಂಘಟನೆಯು ಸಮಾಜಮುಖಿ ಕಾರ್ಯಗಳನ್ನು ಮಾಡಬೇಕಿದೆ. ಕಳೆದೆರಡು ವರ್ಷ ಗಳಿಂದ ಕೊರೊನಾ ಸಂದರ್ಭದಲ್ಲಿ ಸಂಘಟನೆಯು ಸಂಕಷ್ಟಕ್ಕೆ ಸಿಲುಕಿದವರ ಸಮಸ್ಯೆಗಳಿಗೆ ಸ್ಪಂದಿಸಿದೆ ಎಂದರು. ಸಂಘಟನೆಯು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಹಲವಾರು ಮಂದಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಸಂ.ಸ. ಸಮಿತಿಯ ಸಿದ್ದಾಪುರ ಘಟಕದ ಅಧ್ಯಕ್ಷ ಹೆಚ್.ಎನ್. ಪಳನಿಸ್ವಾಮಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ತುಳಸಿ, ಮಾಜಿ ಜಿ.ಪಂ. ಸದಸ್ಯ ಎಂ.ಎಸ್. ವೆಂಕಟೇಶ್, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಎಸ್.ಬಿ. ಪ್ರತೀಶ್, ಮೂಸಾ, ಶುಕೂರ್, ಕಾವೇರಪ್ಪ, ಪ.ಪಂ.ಮಾಜಿ ಸದಸ್ಯೆ ಚೆನ್ನಮ್ಮ, ಜೆ.ಕೆ. ಮುತ್ತಮ್ಮ, ವಿ.ಆರ್. ಸತೀಶ್ ಇನ್ನಿತರರು ಹಾಜರಿದ್ದರು. ರಂಜಿತ ಪ್ರಾರ್ಥಿಸಿ, ಶುಕೂರ್ ಸ್ವಾಗತಿಸಿ, ವಂದಿಸಿದರು. ಇದೇ ಸಂದರ್ಭದಲ್ಲಿ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಗ್ರಾಮ ಪಂಚಾಯಿತಿ ನೌಕರರಿಗೆ, ಜನಪ್ರತಿನಿಧಿಗಳಿಗೆ ಅತಿಥಿಗಳು ಸನ್ಮಾನಿಸಿ, ಗೌರವಿಸಲಾಯಿತು.
-ಚಿತ್ರ ವರದಿ: ವಾಸು ಎ.ಎನ್.