ಸೋಮವಾರಪೇಟೆ, ಅ. ೧೦: ಪಟ್ಟಣದ ಆನೆಕೆರೆ ಬಳಿಯಿಂದ ಕಿಬ್ಬೆಟ್ಟ ಮಾರ್ಗವಾಗಿ ಕಿಬ್ಬೆಟ್ಟ ಎಸ್ಟೇಟ್ ಸಮೀಪದ ಶನಿವಾರಸಂತೆ ರಾಜ್ಯ ಹೆದ್ದಾರಿವರೆಗಿನ ರಸ್ತೆಯನ್ನು ೧.೫೦ ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ ಕೈಗೊಳ್ಳಲು ಉದ್ದೇಶಿಸಲಾಗಿರುವ ಹಿನ್ನೆಲೆ, ಗ್ರಾಮಸ್ಥರೇ ರಸ್ತೆಗಾಗಿ ಮರಗಳನ್ನು ತೆರವುಗೊಳಿಸಿದ್ದಾರೆ.

ಈ ಮಾರ್ಗದ ಎರಡೂ ಬದಿಗಳಲ್ಲಿ ಗ್ರಾಮಸ್ಥರ ತೋಟಗಳಿದ್ದು, ಮರಗಳನ್ನು ಬೆಳೆಯಲಾಗಿತ್ತು. ಇದೀಗ ೨೫ ಅಡಿ ಅಗಲದ ರಸ್ತೆ ನಿರ್ಮಾಣಕ್ಕೆ ಯೋಜನೆ ಸಿದ್ಧಗೊಂಡಿರುವ ಹಿನ್ನೆಲೆ ಸ್ವತಃ ಗ್ರಾಮಸ್ಥರೇ ಶ್ರಮದಾನದ ಮೂಲಕ ರಸ್ತೆ ಬದಿಯಲ್ಲಿನ ತೋಟಗಳ ಮರಗಳನ್ನು ತೆರವುಗೊಳಿಸುತ್ತಿದ್ದಾರೆ.

ಲೋಕೋಪಯೋಗಿ ಇಲಾಖೆಯಿಂದ ೩.೫ ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಗೆ ೧.೫೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಸಹ ಆಗಿದೆ. ಆದರೆ ರಸ್ತೆ ಬದಿಯಲ್ಲಿರುವ ಮರಗಳನ್ನು ತೆರವುಗೊಳಿಸಲು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಇದೀಗ ಗ್ರಾಮಸ್ಥರೇ ಮುಂದೆ ನಿಂತು ಮರಗಳನ್ನು ತೆರವುಗೊಳಿಸುತ್ತಿದ್ದಾರೆ.

ಇದರೊಂದಿಗೆ ರಸ್ತೆಗೆ ಅಗತ್ಯವಾಗಿರುವ ಸ್ಥಳಾವಕಾಶವನ್ನೂ ಬಿಟ್ಟುಕೊಟ್ಟಿದ್ದು, ಹಳೆಯ ಬೇಲಿ ತೆಗೆದು ಹೊಸ ಬೇಲಿ ನಿರ್ಮಾಣ ಮಾಡುತ್ತಿದ್ದಾರೆ. ಗ್ರಾಮದ ಅಧ್ಯಕ್ಷ ಮನಿಲ್(ಮಧು) ಅವರ ನೇತೃತ್ವದಲ್ಲಿ ೫೦ಕ್ಕೂ ಅಧಿಕ ಗ್ರಾಮಸ್ಥರು ಶ್ರಮದಾನದಲ್ಲಿ ತೊಡಗಿಕೊಂಡಿದ್ದಾರೆ.

ಈ ರಸ್ತೆಯ ಆಯ್ದ ಕಡೆಗಳಲ್ಲಿ ಕಾಂಕ್ರೀಟ್ ಹಾಗೂ ಉಳಿದ ಸ್ಥಳಗಳಲ್ಲಿ ಡಾಂಬರು ರಸ್ತೆ ನಿರ್ಮಾಣವಾಗಲಿದ್ದು, ಸದ್ಯದಲ್ಲಿಯೇ ಕಾಮಗಾರಿ ಪ್ರಾರಂಭವಾಗಲಿದೆ. ಈ ಹಿನ್ನೆಲೆ ರಸ್ತೆಯ ಬದಿಯಲ್ಲಿರುವ ಮರಗಳನ್ನು ತೆರವುಗೊಳಿಸಲಾಗಿದೆ. ೨೫ ಅಡಿ ಅಗಲದಲ್ಲಿ ರಸ್ತೆ ನಿರ್ಮಾಣವಾಗಲಿದ್ದು, ಗ್ರಾಮಸ್ಥರಿಗೆ ಹೆಚ್ಚಿನ ಅನುಕೂಲ ವಾಗಲಿದೆ ಎಂದು ಕಿಬ್ಬೆಟ್ಟ ಮಧು ತಿಳಿಸಿದ್ದಾರೆ.