ಗೋಣಿಕೊಪ್ಪ ವರದಿ, ಅ. ೯ : ಚೆನ್ನಂಗಿ ವ್ಯಾಪ್ತಿಯಲ್ಲಿ ಲಸಿಕೆ ಪಡೆಯಲು ಹಿಂದೇಟು ಹಾಕಿ ಓಡಿದವರಿಗೂ ಕೂಡ ಲಸಿಕೆ ಹಾಗೂ ಆರೋಗ್ಯ ಕಾರ್ಯಕರ್ತರು ಕೊರೊನಾ ನಿರ್ಮೂಲನೆಗೆ ಮುಂದಾದರು.
ಮನೆ, ಮನೆಗೆ ಕೊರೊನಾ ಲಸಿಕೆ ಅಭಿಯಾನದಲ್ಲಿ ಹಾಡಿ ನಿವಾಸಿಗಳು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಕಾರಣ ಹಾಡಿಗೆ
ತೆರಳಿ ನೀಡಲು ಮುಂದಾದ ಸಂದರ್ಭ ಆರೋಗ್ಯ ಕಾರ್ಯಕರ್ತರನ್ನು ಕಂಡು ಒಂದಷ್ಟು ಹಾಡಿ ನಿವಾಸಿಗಳು ಓಡಿ ತಪ್ಪಿಸಿಕೊಂಡರು. ಉಳಿದವರು ಉತ್ತಮ ಸ್ಪಂದನ ನೀಡಿದರು. ಆದರೂ,
(ಮೊದಲ ಪುಟದಿಂದ) ಕಾರ್ಯಕರ್ತರು ಓಡಿದವರ ಮನವೊಲಿಸಿ ಲಸಿಕೆ ನೀಡುವಲ್ಲಿ ಯಶಸ್ವಿಯಾದರು. ಸಂಜೆವರೆಗೂ ಅಭಿಯಾನ ನಡೆಯಿತು. ಎಲ್ಲ ಜಾಗಕ್ಕೂ ರಸ್ತೆ ಸೌಕರ್ಯ ಇಲ್ಲದ ಕಾರಣ, ನಡೆದುಕೊಂಡು ಹೋಗಿ ಲಸಿಕೆ ನೀಡಲಾಯಿತು.
ಚೆನ್ನಂಗಿ, ಚೊಟ್ಟೆಪಾರೆ, ಕೆಸವಿನಕೆರೆ, ದೆಯ್ಯದಹಡ್ಲು ಹಾಡಿಗೆ ತೆರಳಿ ಲಸಿಕೆ ನೀಡಲಾಯಿತು. ಆಶಾಕಾರ್ಯಕರ್ತೆ, ಆರೋಗ್ಯ ಕಾರ್ಯಕರ್ತೆಯರು ಮುಖ್ಯ ಪಾತ್ರವಹಿಸಿದರು. ಸುಮಾರು ೧೩೦ ಜನರಿಗೆ ಲಸಿಕೆ ನೀಡಿದರು.
ಚೆನ್ನಯ್ಯನಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಎಸ್. ಶಿವಪ್ಪ ಗೊಟ್ಯಾಳ್ ಮುಂದಾಳತ್ವದಲ್ಲಿ ಅಭಿಯಾನ ನಡೆಯಿತು. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಅರುಣ್, ಪೊಲೀಸ್ ಸಿಬ್ಬಂದಿ ಶಿವಕುಮಾರ್ ಭಾಗವಹಿಸಿದ್ದರು.