ಮಡಿಕೇರಿ, ಅ. ೯: ಮಡಿಕೇರಿಯ ಸರ್ಕಾರಿ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ವಿದ್ಯಾಸೇತು ಮಾರ್ಗದರ್ಶಿ ಪುಸ್ತಕಗಳನ್ನು ನೀಡಲಾಯಿತು.
ಶಾಲಾ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಿದ್ಯಾಸೇತು ಮಾರ್ಗದರ್ಶಿ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ, ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೈಪಿಡಿಗಳನ್ನು ನೀಡಲಾಗುತ್ತಿದೆ. ಮಡಿಕೇರಿ, ಗರಗಂದೂರು, ಚೆಟ್ಟಳ್ಳಿ, ಕಡಗದಾಳು ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ. ಮಾತನಾಡಿ, ರೋಟರಿ ಜಿಲ್ಲೆ ೩೧೮೧ ವತಿಯಿಂದ ಈ ವರ್ಷ ೧೨ ಲಕ್ಷ ವಿದ್ಯಾಸೇತು ಪುಸ್ತಕಗಳನ್ನು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಶಾಲಾ ಗ್ರಂಥಾಲಯದ ಮೂಲಕ ನೀಡಲಾಗುತ್ತಿದ್ದು ಮಾರ್ಗದರ್ಶಿ ಪುಸ್ತಕದ ಪ್ರಯೋಜನ ಪಡೆದ ವಿದ್ಯಾರ್ಥಿಗಳು ಇದೇ ಪುಸ್ತಕಗಳನ್ನು ಮುಂದಿನ ವರ್ಷದ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಬೇಕಾಗಿದೆ ಎಂದು ಮಾಹಿತಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ನಳಿನಿ ಪೂವಯ್ಯ, ದೈಹಿಕ ಶಿಕ್ಷಕ ಜಿಮ್ಮಿ ಸಿಕ್ವೇರಾ ಹಾಜರಿದ್ದರು.