ಪ್ರತಿಭಟನೆಯ ಎಚ್ಚರಿಕೆ

ಮಡಿಕೇರಿ, ಅ. ೯: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಲೆತಿರಿಕೆ ಬೆಟ್ಟದಲ್ಲಿ ೨೦೧೯ ರಲ್ಲಿ ಅತಿವೃಷ್ಟಿಯಿಂದ ಅನಾಹುತ ಸಂಭವಿಸಿ ಅನೇಕರು ಮನೆಗಳನ್ನು ಕಳೆದುಕೊಂಡಿದ್ದಾರೆ. ಪರ್ಯಾಯ ಆಶ್ರಯವಾಗಿ ನೂತನ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡುವಂತೆ ಸರ್ಕಾರ ಆದೇಶ ಮಾಡಿ ಎರಡು ವರ್ಷವಾದರೂ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿಲ್ಲವೆAದು ಕೊಡಗು ರಕ್ಷಣಾ ವೇದಿಕೆ ಆರೋಪಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಕೊರವೇಯ ಜಿಲ್ಲಾಧ್ಯಕ್ಷ ಪವನ್ ಪೆಮ್ಮಯ್ಯ, ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಉಸ್ತುವಾರಿ ತಂಬAಡ ಡ್ಯಾನಿ ನಾಣಯ್ಯ ಹಾಗೂ ವೀರಾಜಪೇಟೆ ತಾಲೂಕು ಅಧ್ಯಕ್ಷ ಅಪ್ಪಂಡೇರAಡ ಯಶವಂತ್ ಕಾಳಪ್ಪ ಜಿಲ್ಲಾಡಳಿತದ ವಿಳಂಬ ಧೋರಣೆಯನ್ನು ಖಂಡಿಸಿದ್ದಾರೆ.

ವೀರಾಜಪೇಟೆ ಪ.ಪಂ ವ್ಯಾಪ್ತಿಯಲ್ಲಿ ಮಹಾಮಳೆಯಿಂದ ಬಾಧಿತವಾದ ೬೬ ಕುಟುಂಬಗಳನ್ನು ಮಳೆಗಾಲದೊಳಗೆ ಸ್ಥಳಾಂತರಿಸುವುದು ಮತ್ತು ಎರಡನೇ ಹಂತದಲ್ಲಿ ೧೬೫ ಮನೆಗಳು ಸೇರಿದಂತೆ ಒಟ್ಟು ೨೩೧ ಮನೆಗಳನ್ನು ನಿರ್ಮಿಸಲು ಸರ್ಕಾರಿ ಜಮೀನು ಲಭ್ಯವಿಲ್ಲದ ಕಾರಣ ಅಂಬಟ್ಟಿ ಗ್ರಾಮದಲ್ಲಿ ೭.೮ ಎಕರೆ ಜಮೀನನ್ನು ಖರೀದಿಸಲು ಅನುಮೋದನೆಗಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು.

ಆದರೆ ಇಲ್ಲಿಯವರೆಗೆ ಜಾಗ ಖರೀದಿಸುವ ಪ್ರಕ್ರಿಯೆ ನಡೆದಿಲ್ಲ. ಸಂತ್ರಸ್ತರು ಅತಂತ್ರರಾಗಿದ್ದು, ಗೊಂದಲದ ನಡುವೆ ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಡಲು ಶೀಘ್ರ ಜಾಗವನ್ನು ಖರೀದಿಸಬೇಕೆಂದು ಪ್ರಮುಖರು ಒತ್ತಾಯಿಸಿದ್ದಾರೆ. ವಿಳಂಬ ಧೋರಣೆ ಹೀಗೆ ಮುಂದುವರೆದರೆ ಸಾರ್ವಜನಿಕರ ಸಹಕಾರದೊಂದಿಗೆ ಪ.ಪಂ ಎದುರು ಕೊರವೇ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.