ಸೋಮವಾರಪೇಟೆ, ಅ. ೯: ಗಾಂಧಿ ಪಥ-ಗ್ರಾಮ ಪಥದ ಮೂಲಕ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ನಿರ್ಮಾಣ ಗೊಂಡಿರುವ ಹೊಸತೋಟ-ಮಾದಾಪುರ ಸಂಪರ್ಕ ರಸ್ತೆ ನಿರ್ಮಾಣಗೊಂಡ ವರ್ಷದಲ್ಲೇ ಕಿತ್ತು ಬರುತ್ತಿದ್ದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸತೋಟದಿಂದ ಮಾದಾಪುರ ಸಂಪರ್ಕ ರಸ್ತೆಯಲ್ಲಿ ಡಾಂಬರೀಕರಣ ನಡೆಸಿದ್ದು, ಈಗಾಗಲೇ ರಸ್ತೆಯ ಬದಿಯಲ್ಲಿ ಬಿರುಕುಗಳು ಉಂಟಾಗಿ ರಸ್ತೆ ಕಿತ್ತುಬರುತ್ತಿದೆ. ಈ ರಸ್ತೆ ನಿರ್ಮಾಣಗೊಂಡ ನಂತರದ ೫ ವರ್ಷಗಳ ಕಾಲ ನಿರ್ವಹಣೆಯನ್ನು ಸಂಬAಧಿಸಿದ ಗುತ್ತಿಗೆದಾರರೇ ಮಾಡಬೇಕಿದ್ದು, ಈ ಬಗ್ಗೆ ಅಭಿಯಂತರರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ ರೂ. ೮.೭೫ ಕೋಟಿ ಅನುದಾನದಡಿ ೬.೪ ಕಿ.ಮೀ. ಉದ್ದದ ರಸ್ತೆಯನ್ನು ಡಾಂಬರೀಕರಣ ಹಾಗೂ ಕಾಂಕ್ರಿಟೀಕರಣ ಮಾಡಿದ್ದು, ೫ ವರ್ಷಗಳ ಕಾಲ ಪ್ರತಿ ವರ್ಷ ರಸ್ತೆ ನಿರ್ವಹಣೆ ಮಾಡಬೇಕು. ೬ನೇ ವರ್ಷ ಮರು ಡಾಂಬರೀಕರಣ ಮಾಡಬೇಕೆಂಬ ಆದೇಶವಿದೆ. ಈಗಾಗಲೇ ರಸ್ತೆಯ ಚರಂಡಿಗಳಲ್ಲಿ ಮಣ್ಣು ಶೇಖರಣೆಗೊಂಡಿದ್ದು, ಡಾಂಬರು ರಸ್ತೆಯೂ ಹಾಳಾಗುತ್ತಿದೆ. ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಸ್ಥಳೀಯರಾದ ಸಲೀಂ, ಸದಾನಂದ್, ಗೌತಮ್ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.