ಇAದು ವಿಶ್ವ ಮಾನಸಿಕ ದಿನ
‘ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ’ ಇದು ಪ್ರಸಿದ್ಧ ನಾಣ್ನುಡಿ. ದೇಹ ಮತ್ತು ಮನಸ್ಸು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎನ್ನುವುದು ಇದರ ಮಥಿತಾರ್ಥ. ಆದರೂ ದೈಹಿಕ ಆರೋಗ್ಯಕ್ಕಾಗಿ ಇನ್ನಿಲ್ಲದ ಕಸರತ್ತು ಮಾಡಿ, ಪಾಲನೆ ಪೋಷಣೆಗೆ ಶರಣಾದವರು ಕೊನೆಗೆ ಮಾನಸಿಕ ಆರೋಗ್ಯದ ವಿಚಾರಕ್ಕೆ ಬಂದಾಗ ಅಷ್ಟೇ ವೇದನೆ, ಸಮಸ್ಯೆಗಳಿಂದ ಬಳಲುತ್ತಾರೆ. ಇದು ಅಚ್ಚರಿಗೊಳಿಸುವ ಸಂಗತಿ. ದೇಹಕ್ಕಾಗುವ ತೊಂದರೆಗೆ ಬೇಗನೆ ಪರಿಹಾರ ಪಡೆದುಕೊಳ್ಳಬಹುದು. ಆದರೆ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡರೆ ಅದನ್ನು ಮರಳಿಪಡೆಯಲು ಸುದೀರ್ಘ ಸಮಯ ತೆಗೆದುಕೊಳ್ಳಬೇಕಾಗುತ್ತದೆ. ಅಷ್ಟರಲ್ಲಿ ದೇಹದ ಆರೋಗ್ಯದಲ್ಲಿ ಅದೆಷ್ಟೋ ಋಣಾತ್ಮಕ ಪರಿಣಾಮಗಳು ಉಂಟಾಗಿರುತ್ತವೆ. ನಾವು ನಮ್ಮೊಳಗಿರುವ ಮನಸ್ಸು ಎಂಬ ಅಂತರಗAಗೆಯನ್ನು ಪರಿಶುದ್ಧವಾಗಿಟ್ಟುಕೊಳ್ಳುವಲ್ಲಿ ಎಡವುದರ ಪರಿಣಾಮವಿದು.
ಮನುಷ್ಯ ಸಂಘಜೀವಿ ಎಂದಾದ ಮೇಲೆ ಸಾಂಘಿಕ ಜೀವನ ನಡೆಸಲು ಬೇಕಾಗಿರುವುದು ಹೊಂದಾಣಿಕೆಯ ಮನಸ್ಥಿತಿ. ಈ ಹೊಂದಾಣಿಕೆಯ ಸ್ವಭಾವ ಕರಗತವಾಗಬೇಕಾದರೆ ಅದು ಸಮಾಜಮುಖೀ ಜೀವನ ಶೈಲಿ, ಅಭ್ಯಾಸ, ಚಿಂತನೆಗಳಿAದ ಸಾಧ್ಯ. ಅದೂ ಕೂಡ ಮೂಲತಃ ಅವಿಭಕ್ತ ಕುಟುಂಬದ ಮೂಲತತ್ವಗಳಿಂದಲೇ. ನಮ್ಮ ಜೀವನ ದೃಷ್ಟಿಯಲ್ಲಿ ಬದಲಾವಣೆ ಆದುದರಿಂದ ಕೆಲವು ವರ್ಷಗಳ ಹಿಂದೆ ಇದ್ದ ಸುಖೀ ಸಮಾಜದ ಅಸ್ತಿತ್ವಕ್ಕೆ ಭಂಗ ಉಂಟಾಯಿತು. ಜೀವನದ ನೈಜ ಸುಖವೆಂದರೆ ಅದು ಕೇವಲ ವೈಭೋಗ ಎಂಬುದು ತಪ್ಪು ಕಲ್ಪನೆ. ಸಂತೋಷ ಎನ್ನುವ ಮೌಲ್ಯವೇ ವಾಣಿಜ್ಯೀಕರಣಗೊಳ್ಳುತ್ತಿದ್ದಂತೆ ಮಾನಸಿಕ ನೆಮ್ಮದಿಗಾಗಿ, ಸಮಸ್ಯೆಗಳ ಪರಿಹಾರಕ್ಕಾಗಿ ಪುನಃ ತಾಂತ್ರಿಕತೆ ಹಾಗೂ ವಿಜ್ಞಾನದ ಮೊರೆಹೋಗಬೇಕಾದುದು ವಿಪರ್ಯಾಸ. ಆದರೆ ನಮ್ಮೊಳಗಿನ ಸಂತೋಷಕ್ಕೆ ಕಾರಣೀಕರ್ತರಾಗುವುದು ಹ್ಯಾಪಿ ಹಾರ್ಮೋನುಗಳೆಂಬ ರಾಸಾಯನಿಕ ದ್ರವಗಳು ಎಂಬುದನ್ನು ಅರಿತು ಅವುಗಳ ಹೊಂದಾಣಿಕೆಗೆ ಅನುಸಾರವಾಗಿ ಆಹಾರಪದ್ಧತಿ, ಜೀವನಕ್ರಮ ರೂಪಿಸಿಕೊಳ್ಳುವ ಮಟ್ಟಿಗೆ ಬೆಳೆದದ್ದು ಆಶಾದಾಯಕ ಬೆಳೆವಣಿಗೆ.
ಮನಸ್ಸೆಂಬ ಯಂತ್ರದ ಸುಸ್ಥಿತಿಯ ನಿರ್ವಾಹಕ ಯಾರೇ ಆಗಲಿ, ಮಾನಸಿಕ ಸ್ಥಿರತೆ ಉಳ್ಳವನು ಪ್ರಪಂಚದಲ್ಲಿ ಅತ್ಯಂತ ಸುಖಜೀವಿ. ಇಲ್ಲಿ ಬಡತನ, ಶ್ರೀಮಂತಿಕೆ, ಪ್ರತಿಷ್ಠೆ, ವೈಭವ, ಯಾವುದೂ ಮೌಲ್ಯನಿರ್ಧಾರಕಗಳಲ್ಲ. ಕೇವಲ ವ್ಯಕ್ತಿಯ ಜೀವನದೃಷ್ಟಿ, ಕೌಶಲಗಳಷ್ಟೇ ಗಣನೆಗೆ ನಿಲುಕುವಂತಹದ್ದು. ಮೊದಲು ನಮ್ಮ ದಿನನಿತ್ಯದ ಅಭ್ಯಾಸ-ಹವ್ಯಾಸಗಳು ನಮಗೆ ತೃಪ್ತಿ ಕೊಡುವಂತಿರಬೇಕು. ಕಷ್ಟವಿರಲಿ, ನೋವಿರಲಿ, ಸೋಲು ಗೆಲುವಿರಲಿ ಎರಡನ್ನೂ ಸಮಾನ ಮನಸ್ಥಿತಿಯಿಂದ ಸ್ವೀಕರಿಸುವ ಮನಸ್ಥಿತಿ ನಮ್ಮದಾಗಬೇಕು. ಪ್ರಾಣಿ ಪ್ರಪಂಚದಲ್ಲಿ ಪ್ರಾಕೃತಿಕ ಪ್ರಭಾವಗಳಿಗೆ ಸಹಜವಾಗಿ ಅವು ತಮ್ಮನ್ನು ತಾವು ಒಡ್ಡಿಕೊಂಡು ಜೀವಿಸುವ ರೀತಿ ಮನುಷ್ಯ ಜೀವಿಗೂ ಮಾದರಿಯಾಗಬೇಕು. ಎಷ್ಟೋ ಬಾರಿ ನಾವೇ ಸಮಸ್ಯೆಗಳನ್ನು ಸೃಷ್ಟಿಸಿಕೊಂಡು ನಾವೇ ಪರಿಹಾರಕ್ಕೆ ಒದ್ದಾಡುತ್ತೇವೆ. ಮನೆಗಳಲ್ಲಿ ಮಗುವಿನ ವ್ಯಕ್ತಿತ್ವ ನಿರ್ಮಾಣದಲ್ಲಿ ತಿಳಿದೋ ತಿಳಿಯದೆಯೋ ಮಾಡಿದ ಅಚಾತುರ್ಯಕ್ಕೆ ಅದೇ ಮಕ್ಕಳು ಮುಂದೆ ಬೇರೇನೋ ಸಮಸ್ಯೆಗಳನ್ನು ಸೃಷ್ಟಿಸಿಕೊಂಡು ತಾವೂ ಸಿಕ್ಕಿ ತೋಳಲಾಡುತ್ತಾರೆ. ಕೊನೆಗೆ ಬದುಕಿನ ದುರಂತ ಅಂತ್ಯಕ್ಕೂ ತಯಾರಾಗಿಬಿಡುತ್ತಾರೆ. ಹಾಗಾದರೆ ಮನುಷ್ಯನ ಬುದ್ಧಿವಂತಿಕೆಗೇನು ಅರ್ಥ?
ಮಾನವಿಕ ಸಂಬAಧಗಳ ಮಟ್ಟ ಅತ್ಯುತ್ತಮವಾಗಿರಬೇಕು. ಸಮಾಜದಲ್ಲಿ ಒಬ್ಬರ ನೋವಿಗೆ ಸ್ಪಂದಿಸುವವರು ಕೆಲವರಾದರೆ ವಿಕೃತ ಸಂತೋಷ ಅನುಭವಿಸುವವರು ಮತ್ತೊಂದೆಡೆ. ಮಾನಸಿಕ ಸ್ವಾಸ್ಥö್ಯ ಕಾಪಾಡಿಕೊಳ್ಳಬೇಕಾದರೆ ಸಮಾಜದ ಮುಖ್ಯ ವಾಹಿನಿಗೆ ಬರುವ ಪ್ರಭಾವಿ ವ್ಯಕ್ತಿಗಳ ಗುಣ ಸ್ವಭಾವವೂ ಅಷ್ಟೇ ಪರಿಣಾಮಕಾರಿಯಾಗಿರುತ್ತದೆ. ಕೌಟುಂಬಿಕ ವಲಯ, ಔದ್ಯೋಗಿಕ ವಲಯವೇ ಆಗಿರಲಿ ನಾಯಕನಾದವನ ಕಾರ್ಯವೈಖರಿ ಜನರ ಮಾನಸಿಕ ಆರೋಗ್ಯದ ಮೇಲೆ ಎರಡೂ ರೀತಿಯಲ್ಲಿ ಪರಿಣಾಮ ಬೀರಲು ಸಾಧ್ಯ. ರಾಮರಾಜ್ಯವನ್ನು ನಿರ್ಮಿಸಿದ ರಾಮ, ರಾವಣ ರಾಜ್ಯಕ್ಕೆ ಉದಾಹರಣೆಯಾದ ರಾವಣ ಇದಕ್ಕೆ ಸಾಕ್ಷಿ. ಮುಕ್ತ, ಸ್ವಚ್ಛ, ಶಾಂತ ವಾತಾವರಣದಲ್ಲಿ ಬದುಕುವ ವ್ಯಕ್ತಿಯ ಮನಸ್ಥಿತಿ ಅಷ್ಟೇ ಆರೋಗ್ಯದಾಯಕವಾಗಿರುತ್ತದೆ. ಅಶಾಂತ ಮನಸ್ಥಿತಿ ಎಲ್ಲಾ ಸಮಸ್ಯೆಗಳಿಗೆ ಮೂಲ. ಪ್ರತಿಯೊಂದು ಅನಾಹುತ, ಅನಾಚಾರ, ಅಪರಾಧಗಳ ಮೂಲ ಅನಾರೋಗ್ಯಕರ ಮನಸ್ಥಿತಿ.
ತನಗೆ ತಾನೇ ಸೃಷ್ಟಿಸಿಕೊಂಡ ಸಮಸ್ಯೆಗಳಿಂದ ಹೊರಬರಲು ಕೌನ್ಸಿಲಿಂಗ್ ನಂತಹ ವೈದ್ಯಕೀಯ ಚಿಕಿತ್ಸೆಗೆ ಒಳಗಾಗುತ್ತಿರುವವರು ಹಲವರು. ಇದು ಮನುಷ್ಯನ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಇಂದು ವ್ಯಾಪಿಸಿಕೊಂಡಿದೆ. ಸಾಂತ್ವನ ನೀಡಲು ವೃತ್ತಿ ಪರಿಣಿತರೇ ಆಗಬೇಕೆಂದೇನೂ ಇಲ್ಲ. ಬದುಕಿನ ಬಗೆಗೆ ಅನುಭವಸ್ಥರು, ವಿಚಾರವಂತರು, ಸ್ನೇಹ ಪರರು, ಮುಖ್ಯವಾಗಿ ನಂಬಿಕೆಗೆ ಅರ್ಹರಾದವರು ತಮಗೆ ಅರಿವಿಲ್ಲದೆ ಈ ಸ್ಥಾನದಲ್ಲಿ ಯಶಸ್ವಿಗಳಾಗಿರುತ್ತಾರೆ. ಮನೆಯಲ್ಲಿ ಹಿರಿಯರು, ವೃದ್ಧರು, ಶಿಕ್ಷಕರು, ಸಮಾಜದ ಹಿರಿಯ ಮುಖಂಡರಿAದ ಸಮಸ್ಯೆಗೆ ಪರಿಹಾರ, ಸಾಂತ್ವನದ ನುಡಿಗಳು ನಡೆಯುತ್ತಲೇ ಇರುತ್ತವೆ. ಮಾನಸಿಕವಾಗಿ ಕುಗ್ಗಿದ ವ್ಯಕ್ತಿಗೆ ಆಪ್ಯಾಯಮಾನವಾದ ಒಂದೇ ಒಂದು ಭರವಸೆಯ ನುಡಿ ಆ ವ್ಯಕ್ತಿಯಲ್ಲಿ ಅದ್ಭುತ ಪವಾಡವನ್ನು ಸೃಷ್ಟಿಸಬಲ್ಲುದು. ಒಂದು ಕೊಂಕಿನ ಮಾತು ಜೀವವನ್ನೇ ಮುಗಿಸಲೂಬಹುದು. ಪ್ರತಿಯೊಬ್ಬ ವ್ಯಕ್ತಿಯ ಮಾನಸಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣದ ಉದ್ದೇಶ ಈಡೇರಬೇಕು. ಧಾರ್ಮಿಕ ಪ್ರವಚನಗಳು, ಉಪದೇಶಗಳು, ವಿಚಾರ ಸಂಕಿರಣಗಳು ಈ ನಿಟ್ಟಿನಲ್ಲಿ ಮಾನವ ಸಂಕುಲದ ಮಾನಸಿಕ ಆರೋಗ್ಯದ ಮೇಲೆ ಹಿಡಿತ ಸಾಧಿಸುವ ಕಾರ್ಯವಾಗಬೇಕು. ಜಾತಿ, ಧರ್ಮಗಳ ಅಡಿಯಲ್ಲಿ ದ್ವೇಷ, ಅಸೂಯೆಗಳೆಂಬ ಅನಿಷ್ಟ ಭಾವಗಳ ಉದ್ದೀಪನದ ಕಾಯಕಕ್ಕೆ ಅಂತ್ಯ ಕಾಣಿಸಬೇಕು. ಪ್ರಪಂಚ ಜ್ಞಾನದ ಅರಿವು ಮಗುವಿಗೆ ತಿಳಿದಿರಲೇಬೇಕೆಂಬ ನಿಟ್ಟಿನಲ್ಲಿ ಶತಾಯಗತಾಯ ಪ್ರಯತ್ನ ಪಡುವ ನಾವು ಮಗುವಿನೊಳಗಿರುವ ಮನಸ್ಸೆಂಬ ಅದ್ಭುತ ಯಂತ್ರ ಕಾರ್ಯನಿರ್ವಹಿಸುವ ರೀತಿಗೆ, ಅದರ ಸಬಲೀಕರಣಕ್ಕೆ ಬೇಕಾದ ಪೂರಕ ಚಟುವಟಿಕೆಗಳನ್ನು ಒದಗಿಸಬೇಕು. ಇವು ಜೀವನ ಶೈಲಿಯಂತೆ ಕರಗತವಾದಲ್ಲಿ ಮುಂದೆ ಮಕ್ಕಳು ಮಾನಸಿಕ ಸಮಸ್ಯೆಗಳಿಗೆ ತುತ್ತಾಗಿ ಸಾಮಾಜಿಕ ಸಮಸ್ಯೆಗಳ ಸೃಷ್ಟಿಗೆ ಕಾರಣರಾಗುವುದನ್ನು ತಡೆಗಟ್ಟಲು ಸಾಧ್ಯವಿದೆ.
ಮನಸ್ಸೆಂಬ ಅಂತರಗAಗೆಯ ಪರಿಶುದ್ಧತೆಯೊಂದಿಗೆ ಸಜ್ಜನರ ಸಹವಾಸದಲ್ಲಿ ಸವಿಜೇನಿನಂತಹ ಬದುಕನ್ನು ಕಟ್ಟಿಕೊಳ್ಳೋಣ. ಹಂಸ ಕ್ಷೀರ ನ್ಯಾಯದ ನೀತಿಯುಕ್ತ ಬಾಳ್ವೆ ನಮ್ಮದಾಗಲಿ. ಮನಸ್ಸಿನ ಮಾತಿಗನುಸಾರವಾಗಿ ಬಾಳಿನ ತುತ್ತನ್ನು ಸವಿಯೋಣ.
- ಪ್ರತಿಮಾ ಹರೀಶ್ ರೈ, ಉಪನ್ಯಾಸಕರು,
ಸಂತ ಅನ್ನಮ್ಮ ಪದವಿ ಕಾಲೇಜು, ವೀರಾಜಪೇಟೆ.