ಪೆರಾಜೆ, ಅ. ೯: ಭಾರತೀಯ ಜನತಾ ಪಾರ್ಟಿ ಕೊಡಗು ಜಿಲ್ಲೆ, ರೈತ ಮೋರ್ಚಾ ಕೊಡಗು ಜಿಲ್ಲೆ ಮತ್ತು ಶಕ್ತಿ ಕೇಂದ್ರ, ಬೂತ್ ಸಮಿತಿ, ಯುವ ಮೋರ್ಚಾ, ಮಹಿಳಾ ಮೋರ್ಚಾ ಹಾಗೂ ಪೇಜ್ ಪ್ರಮುಖರೊಂದಿಗೆ "ಒಂದು ದಿನದ ರೈತರ ಮನೆಗೆ ಭೇಟಿ" ಕಾರ್ಯಕ್ರಮಕ್ಕೆ ಪೆರಾಜೆಯಲ್ಲಿ ಇತ್ತೀಚೆಗೆ ಚಾಲನೆ ನೀಡಲಾಯಿತು.
ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಎ.ವಿ ತೀರ್ಥರಾಮ ಮಾತನಾಡಿ, ಇದೊಂದು ವಿನೂತನ ಕಾರ್ಯಕ್ರಮ. ರೈತರ ಅಹವಾಲುಗಳನ್ನು ಕೇಳುವುದರ ಜೊತೆಗೆ ರೈತರಿಗೆ ಕೇಂದ್ರ ಸರ್ಕಾರದಿಂದ ಸಿಗುವ ವಿವಿಧ ಯೋಜನೆ, ಸೌಲಭ್ಯಗಳ ಮಾಹಿತಿ ಮತ್ತು ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪ್ರಧಾನಿ ಮೋದಿಯವರ ಯ್ಯಾಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಕೃಷಿ ಮತ್ತು ರೈತರಿಗೆ ಸಿಗುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕೇಂದ್ರ ಸರ್ಕಾರವು ರೈತರಿಗೆ ಪ್ರಯೋಜನವಾಗುವ ದೃಷ್ಟಿಯಿಂದ ಇಂದಿನ ಹವಾಮಾನ ಬದಲಾವಣೆ ಸಮಯದಲ್ಲಿ ಕೃಷಿ ವಿಜ್ಞಾನಿಗಳು ಸಂಶೋಧನೆ ಮಾಡಿರುವ, ಅಲ್ಲದೆ ಕನಿಷ್ಟ ನೀರನ್ನು ಕೊಟ್ಟು ಹೆಚ್ಚು ಫಸಲನ್ನು ಪಡೆಯುವ ಹಣ್ಣು, ತರಕಾರಿಗಳು, ಬೀಜಗಳನ್ನು ಕೊಂಡುಕೊಳ್ಳಬೇಕು ಎಂದು ತಿಳಿಸಿದರು.
ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಕೇಂದ್ರ ಸರ್ಕಾರ ರೈತರಿಗೆ ನೀಡಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್, ಅಟಲ್ ಪಿಂಚಣಿ, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ, ಪ್ರ‍್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆ, ಸುಕನ್ಯಾ ಸಮೃದ್ಧಿ, ಆಯುಷ್ಮಾನ್ ಆರೋಗ್ಯ ಕಾರ್ಡ್, ಉದ್ಯೋಗ ಖಾತ್ರಿ ಯೋಜನೆ, ಮಾತೃವಂದನ ಯೋಜನೆ, ಫಸಲ್ ಭೀಮಾ ಕೃಷಿ ವಿಮೆ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತ ಈ ಎಲ್ಲಾ ಸೌಲಭ್ಯಗಳನ್ನು ರೈತರ ಮನೆಗಳಿಗೆ ತೆರಳಿ ಅರ್ಹರಿಗೆ ತಲುಪಿಸುದರ ಜೊತೆಗೆ ರೈತರ ಸಂಕಷ್ಟಗಳನ್ನು ಆಲಿಸಿ ನನಸು ಮಾಡುವ ಜವಬ್ದಾರಿ ಕಾರ್ಯಕರ್ತರ ಮೇಲಿದೆ ಎಂದರು. ಈ ಸಂದರ್ಭ ಗುತ್ತಿಗಾರು ಶಕ್ತಿ ಕೇಂದ್ರದ ಅಧ್ಯಕ್ಷ ಕೃಷ್ಣಯ್ಯ, ಪೆರಾಜೆ ಬಿಜೆಪಿಯ ಹಿರಿಯ ಕಾರ್ಯಕರ್ತ ಮುಕುಂದ ಕುದುಕುಳಿ ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.
ಕಾರ್ಯಕ್ರಮವನ್ನು ಕನ್ನಡ ಪೆರಾಜೆ ಬೂತ್ ಅಧ್ಯಕ್ಷ ಸೀತಾರಾಮ ಕದಿಕಡ್ಕ ಸ್ವಾಗತಿಸಿ, ಪೆರಾಜೆ ಶಕ್ತಿ ಕೇಂದ್ರದ ಅಧ್ಯಕ್ಷ ನಂಜಪ್ಪ ನಿಡ್ಯಮಲೆ ವಂದಿಸಿದರು.