ಸಿದ್ದಾಪುರ, ಅ. ೯: ಕಾಡಾನೆಗಳ ಹಿಂಡು ಭತ್ತದ ಗದ್ದೆಗಳಿಗೆ ಲಗ್ಗೆಯಿಟ್ಟು ಭತ್ತದ ಫಸಲನ್ನು ತುಳಿದು ತಿಂದು ನಾಶಪಡಿಸಿರುವ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ನಡೆದಿದೆ. ಸಿದ್ದಾಪುರದ ಕರಡಿಗೋಡು ಗ್ರಾಮದ ಟೀಕ್‌ವುಡ್ ಕಾಫಿ ತೋಟದ ಮಾಲೀಕರಿಗೆ ಸೇರಿದ ಕೃಷಿ ಮಾಡಿದ ಗದ್ದೆಗಳಿಗೆ ಕಾಡಾನೆಗಳು ದಾಳಿ ನಡೆಸಿ ಕೃಷಿ ಮಾಡಿರುವ ಉತ್ತಮ ತಳಿಯ ಕಪ್ಪು ಅಕ್ಕಿ ಭತ್ತದ ಬೆಳೆಗಳನ್ನು ನಾಶಗೊಳಿಸಿವೆ. ಪರಿಣಾಮ ಅಪಾರ ನಷ್ಟ ಸಂಭವಿಸಿದೆ.
ಕಾಡಾನೆ ಉಪಟಳದಿಂದ ಕಾಫಿ ಕೊಯ್ಲು ಮಾಡಲು ತೋಟದ ಒಳಗೆ ಕೆಲಸ ಮಾಡಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆ ಹಾಳಿಯಿಂದಾಗಿ ಕೈಗೆ ಬಂದ ಫಸಲುಗಳು ಬಾಯಿಗೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಶ್ವತ ಯೋಜನೆಯನ್ನು ಅರಣ್ಯ ಇಲಾಖಾಧಿಕಾರಿಗಳು ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.