ಗೋಣಿಕೊಪ್ಪ ವರದಿ, ಅ. ೮ : ಪೊನ್ನಂಪೇಟೆ ಕ್ರೀಡಾ ವಸತಿ ನಿಲಯ ಮತ್ತು ಮೈದಾನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಮಟ್ಟದಲ್ಲಿ ಗಮನ ಸೆಳೆಯಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಸತಿ ನಿಲಯ ಮೂಲಭೂತ ಸೌಕರ್ಯ ಅಭಿವೃದ್ಧಿ ಸಮಿತಿ ಸದಸ್ಯ ವಿ. ರಘುನಾಥ್ ಭರವಸೆ ನೀಡಿದರು.

ಶುಕ್ರವಾರ ಪೊನ್ನಂಪೇಟೆ ಕ್ರೀಡಾ ವಸತಿ ನಿಲಯಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿ ಮಾತನಾಡಿದರು. ವಸತಿ ನಿಲಯಕ್ಕೆ ಬೇಕಾದ ಮೂಲ ಸೌಕರ್ಯ, ಕ್ರೀಡಾಪಟುಗಳ ಫಿಟ್‌ನೆಸ್‌ಗೆ ಪೂರಕ ಯಂತ್ರೋಪಕರಣ ಅನಿವಾರ್ಯತೆ ಇರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು. ಮೈದಾನ, ವಸತಿ, ಜಿಮ್ ಹೀಗೆ ಸಾಕಷ್ಟು ಸಮಸ್ಯೆಗಳ ಮಾಹಿತಿ ಕಲೆ ಹಾಕಲಾಗಿದ್ದು, ಸಮಿತಿ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಹಾಕಿ ಕ್ರೀಡೆಯೊಂದಿಗೆ ವಿವಿಧ ಕೀಡೆಗೂ ಇಲ್ಲಿ ಮೂಲಸೌಕರ್ಯ ಅನುಷ್ಠಾನಕ್ಕೆ ಅವಕಾಶವಿದೆ. ಈ ಬಗ್ಗೆ ಇಲ್ಲಿ ಮಾಹಿತಿ ಸಿಕ್ಕಿದೆ. ಇದನ್ನು ಸಮಿತಿ ಮೂಲಕ ಸರ್ಕಾರಕ್ಕೆ ಸಲ್ಲಿಸಿ, ಉತ್ತಮ ಕ್ರೀಡಾಪಟುಗಳು ಹೊರಹೊಮ್ಮಲು ಬೇಕಾದ ಸವಲತ್ತು ಕಲ್ಪಿಸಲು ಆದ್ಯತೆ ನೀಡಲಾಗುವುದು. ಹೊಸ ಕಟ್ಟಡ ನಿರ್ಮಾಣದ ಅನಿವಾರ್ಯತೆ ಇರುವುದನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಸಮಯ ಮತ್ತು ತರಬೇತುದಾರರ ಸೂಚನೆ ಕಟ್ಟುನಿಟ್ಟಾಗಿ ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಮನಸ್ಸಿನ ಏಕಾಗ್ರತೆ, ಸಮಯ ಪ್ರಜ್ಞೆ ಕ್ರೀಡೆಗೆ ಮುಖ್ಯ. ಈ ನಿಟ್ಟಿನಲ್ಲಿ ಆಟಕ್ಕೆ ಹೆಚ್ಚು ಒತ್ತು ನೀಡಬೇಕು. ಡ್ರಾö್ಯಗ್ ಫ್ಲಿಕ್ ಕಲೆಗೆ ಆಸಕ್ತಿ ತೋರುವಂತೆ ತಿಳಿಸಿದರು. ತರಬೇತುದಾರ ಕುಪ್ಪಂಡ ಸುಬ್ಬಯ್ಯ, ಮೂಕಳಮಾಡ ಗಣಪತಿ ಇದ್ದರು.