ಮಡಿಕೇರಿ, ಅ. ೮: ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತಿç ಜನ್ಮದಿನಾಚರಣೆ ಅಂಗವಾಗಿ ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮ ಸಭೆಯನ್ನು ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಸಭೆಯಲ್ಲಿ ಮಡಿಕೇರಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶೇಖರ್, ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜವರೇಗೌಡ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಅಂಬೇಡ್ಕರ್ ಅವರು ಉಪಸ್ಥಿತರಿದ್ದರು. ಪ್ರಾರ್ಥನೆಯ ನಂತರ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತಿç ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಜಯಂತಿಯನ್ನು ಆಚರಿಸಿದ ನಂತರ ಕಾರ್ಯನಿರ್ವಹಣಾಧಿಕಾರಿ ಶೇಖರ್ ಅವರು ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿಯು ಅಮೃತ ಗ್ರಾಮ ಪಂಚಾಯಿತಿಯಾಗಿ ಆಯ್ಕೆಯಾಗಿರುವುದಕ್ಕೆ ಪಂಚಾಯಿತಿ ಅಧ್ಯಕ್ಷರು, ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಮತ್ತು ಗ್ರಾಮಸ್ಥರಿಗೆ ಕೃvಜ್ಞತೆ ಸಲ್ಲಿಸಿದರು. ಕಪ್ಪು ನೀರು ಮತ್ತು ಬೂದು ನೀರುಗಳಿಂದ ಆಗಬಹುದಾದ ದುಷ್ಪರಿಣಾಮಗಳನ್ನು ತಿಳಿಸುತ್ತಾ ಇದನ್ನು ತಡೆಗಟ್ಟಲು ವಹಿಸಬೇಕಾಗಿರುವ ಕ್ರಮದ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿದರು.

ಸದ್ಯದಲ್ಲೇ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಜಾಗ ಮಂಜೂರಾತಿ ಆಗಲಿದ್ದು, ಜಾಗ ಮಂಜೂರಾತಿ ಆದೊಡನೆ ಘಟಕವನ್ನು ನಿರ್ಮಿಸುವುದರೊಂದಿಗೆ ವೈಜ್ಞಾನಿಕ ರೀತಿಯಲ್ಲಿ ಘನತ್ಯಾಜ್ಯವನ್ನು ನಿರ್ವಹಣೆ ಮಾಡುವಂತೆ ಗ್ರಾಮ ಪಂಚಾಯಿತಿಗೆ ಸೂಚಿಸಿದರು. ಜಲಜೀವನ್ ಮಿಷನ್ ಯೋಜನೆ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡುತ್ತಾ ೨೦೨೦- ೨೧ನೇ ಸಾಲಿನಲ್ಲಿ ಎಎಒ ಯೋಜನೆಯಲ್ಲಿ ಕುಂಜಿಲ-ಕಕ್ಕಬೆ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುವುದು. ೨೦೨೧- ೨೨ನೇ ಸಾಲಿನಲ್ಲಿ ಪಂಚಾಯ್ತಿಯ ಉಳಿದ ಗ್ರಾಮಗಳಲ್ಲಿ ಎಎಒ ಯೋಜನೆಯನ್ನು ಅನುಷ್ಠಾನ ಮಾಡುವುದಾಗಿ ತಿಳಿಸಿದರು. ಅಧ್ಯಕ್ಷ ಕಲಿಯಂಡ ಅಯ್ಯಪ್ಪ ಸಂಪನ್ ಮಾತನಾಡಿ ಪ್ರಕೃತಿಗೆ ಮಾರಕವಾಗುವಂತಹ ಏಕ ಬಳಕೆ ಪ್ಲಾಸ್ಟಿಕ್‌ಗಳನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ನಿಷೇಧಿಸಲಾಗಿದ್ದು ಮುಂದಿನ ದಿನಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಅನ್ನು ಬಳಸಿದರೆ ಅಂತಹ ವ್ಯಾಪಾರಸ್ಥರಿಗೆ ದಂಡ ವಿಧಿಸಲಾಗುವುದು, ಪುನರಾವರ್ತನೆಯಾದರೆ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಸರ್ವರ ಸಮ್ಮುಖದಲ್ಲಿ ನಿರ್ಣಯ ಕೈಗೊಂಡು ಗ್ರಾಮದ ಸ್ವಚ್ಛತೆಗೆ ಎಲ್ಲರು ಸಹಕರಿಸುವಂತೆ ಮನವಿ ಮಾಡಿಕೊಂಡರು. ಅಭಿವೃದ್ಧಿ ಅಧಿಕಾರಿಗಳು ಗ್ರಾಮಸ್ಥರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾಡಬಹುದಾದ ಕಾಮಗಾರಿಗಳ ಬಗ್ಗೆ ಮತ್ತು ಮಾನದಂಡಗಳ ಬಗ್ಗೆ ಮಾಹಿತಿ ನೀಡಿದರು.