ಸಿದ್ದಾಪುರ, ಅ. ೮: ಕೊಡಗು ಎಸ್.ಎನ್.ಡಿ.ಪಿ ಯೂನಿಯನ್ ವತಿಯಿಂದ ತಾ. ೧೨ ರಂದು ಬ್ರಹ್ಮಶ್ರೀ ನಾರಾಯಣ ಗುರು ಪುಣ್ಯ ಸ್ಮರಣೆ ಅಂಗವಾಗಿ ಸಿದ್ದಾಪುರ ನಾರಾಯಣ ಗುರು ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದು ಎಸ್.ಎನ್.ಡಿ.ಪಿ ಜಿಲ್ಲಾ ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೊಡಗು ಜಿಲ್ಲಾ ಎಸ್.ಎನ್.ಡಿ.ಪಿ. ಯೂನಿಯನ್ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ಈ ಹಿಂದೆ ಮಹಾಮಳೆಗೆ ಸಿಲುಕಿಕೊಂಡು ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸಹಾಯಹಸ್ತ ಚಾಚಿದೆ. ಇದಾದ ಬಳಿಕ ಕಳೆದೆರಡು ವರ್ಷಗಳಿಂದ ಕೊರೊನಾ ಸಂದರ್ಭದಲ್ಲಿ ಸಮಸ್ಯೆಗೆ ಸಿಲುಕಿಕೊಂಡಿದ್ದ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಕೂಡ ನೀಡಿದ್ದು, ಆರ್ಥಿಕ ಸಹಾಯ ಸೇರಿದಂತೆ ಎಲ್ಲಾ ರೀತಿಯಲ್ಲಿ ಸಂಘಟನೆ ಸಹಾಯ ಮಾಡಿರುತ್ತದೆ ಎಂದರು. ಇದೀಗ ಸಮಾಜಮುಖಿ ಕಾರ್ಯದ ಭಾಗವಾಗಿ ತಾ. ೧೨ ರಂದು ತೊಂದರೆಯಲ್ಲಿರುವ ಸಾರ್ವಜನಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಎಸ್.ಎನ್.ಡಿ.ಪಿ ಸಂಘಟನೆಯ ಸದಸ್ಯರು ಸ್ವಯಂಪ್ರೇರಿತವಾಗಿ ರಕ್ತದಾನವನ್ನು ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಕೂಡ ತಮ್ಮ ರಕ್ತವನ್ನು ನೀಡಬಹುದೆಂದು ತಿಳಿಸಿದರು.
ರಕ್ತದಾನ ಶಿಬಿರ ಮಡಿಕೇರಿಯ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಕರುಂಬಯ್ಯ ಹಾಗೂ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ. ಹವಾನಿಯಂತ್ರಿತ ಶವಪೆಟ್ಟಿಗೆ ಸೌಲಭ್ಯ ಇಲ್ಲದ ಹಿನ್ನೆಲೆಯಲ್ಲಿ ಈ ಭಾಗದ ನಿವಾಸಿಗಳು ಆಕಸ್ಮಿಕ ಸಾವನ್ನಪ್ಪಿದ್ದಲ್ಲಿ ಇಲ್ಲಿನವರು ಮಡಿಕೇರಿ ಮುಂತಾದ ಕಡೆಗಳಿಂದ ಶವಪೆಟ್ಟಿಗೆ ತರುವಂತಹ ಪರಿಸ್ಥಿತಿಯಾಗಿದ್ದು, ಇದನ್ನು ಅರಿತ ಎಸ್.ಎನ್.ಡಿ.ಪಿ ಯೂನಿಯನ್ ಇದೀಗ ಹವಾನಿಯಂತ್ರಿತ ಪೆಟ್ಟಿಗೆಯನ್ನು ಖರೀದಿಸಿ ಸಾರ್ವಜನಿಕರ ಸೇವೆಗೆ ನೀಡುವ ಬಗ್ಗೆ ಯೋಜನೆಯನ್ನು ರೂಪಿಸಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಎನ್.ಡಿ.ಪಿ ಯೂನಿಯನ್ನ ನೂತನ ಕಾರ್ಯದರ್ಶಿ ಕೆ.ಬಿ. ಪ್ರೇಮಾನಂದ, ಬ್ರಹ್ಮಶ್ರೀ ನಾರಾಯಣ ಸೌಹಾರ್ದ ಸಹಕಾರ ಸಂಘದ ನಿರ್ದೇಶಕÀ ಎಂ.ಎ. ಆನಂದ ಗಿರೀಶ್ ಮಟ್ಟಂ, ಸತೀಶ್, ಹರಿದಾಸ್ ಹಾಜರಿದ್ದರು.