ಕುಶಾಲನಗರ, ಅ.೮: ದಸರಾದಲ್ಲಿ ಪಾಲ್ಗೊಳ್ಳಲು ದುಬಾರೆ ಸಾಕಾನೆ ಶಿಬಿರದಿಂದ ಮೈಸೂರಿಗೆ ತೆರಳಿದ ವಿಕ್ರಮ ಆನೆಗೆ ಮದ ಹೆಚ್ಚಾದ ಹಿನ್ನೆಲೆ ಪಟ್ಟದ ಆನೆ ಸ್ಥಾನಕ್ಕೆ ಬದಲಿ ಆನೆಯನ್ನು ಹುಡುಕುವಂತಾಗಿದೆ.
ಕೊಡಗು ಜಿಲ್ಲೆಯ ದುಬಾರೆ ಸಾಕಾನೆ ಶಿಬಿರದಿಂದ ತೆರಳಿದ ವಿಕ್ರಮ ಆನೆಗೆ ತಾಲೀಮು ವೇಳೆ ಮದ ಹೆಚ್ಚಾಗಿದ್ದು, ಇದೀಗ ವಿಕ್ರಂ ಆನೆಯನ್ನು ಮೈಸೂರು ಅರಮನೆ ಆವರಣದಲ್ಲಿ ಪ್ರತ್ಯೇಕವಾಗಿ ಕಟ್ಟಿ ಹಾಕಲಾಗಿದೆ. ಇತರ ಆನೆಗಳಿಂದ ಅಂತರ ಹೆಚ್ಚಳ ಕಾಪಾಡಲು ಮಾವುತರು ಕ್ರಮ ಕೈಗೊಂಡಿದ್ದಾರೆ.
ಮದ ಇಳಿಯಲು ಸಾಕಷ್ಟು ಕಾಲಾವಕಾಶ ಬೇಕಾಗುವುದರಿಂದ ಆನೆಗಳ ಮೇಲ್ವ್ವಿಚಾರಕರು ವಿಕ್ರಂ ಮೇಲೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಿದ್ದಾರೆ. ಇದೀಗ ದಿನನಿತ್ಯದ ಕುಶಾಲ ತೋಪು ಮತ್ತು ಮುಂಜಾನೆಯ ತಾಲೀಮಿನಿಂದ ವಿಕ್ರಂ ಅನ್ನು ದೂರವಿಡಲಾಗಿದೆ. ದಸರಾದಲ್ಲಿ ಪಾಲ್ಗೊಳ್ಳಲು ಪಟ್ಟದ ಆನೆಗೆ ಇದೀಗ ಹುಡುಕಾಟ ನಡೆದಿದ್ದು , ಅಧಿಕಾರಿಗಳು ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ. - ಚಂದ್ರಮೋಹನ್