ಮಡಿಕೇರಿ, ಅ. ೮: ತಾಲೂಕಿನ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ೩೨ ಕುಟುಂಬಗಳಿಗೆ ಅಕ್ರಮ ಸಕ್ರಮ ಯೋಜನೆಯಡಿ ಸಾಗುವಳಿ ಚೀಟಿಯನ್ನು ಶಾಸಕ ಕೆ.ಜಿ.ಬೋಪಯ್ಯ ವಿತರಿಸಿದರು.
ನಗರದ ತಾಲೂಕು ತಹಶೀಲ್ದಾರರ ಕಚೇರಿ ಸಭಾಂಗಣದಲ್ಲಿ ತಾಲೂಕಿನ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂಪಾಜೆ, ಭಾಗಮಂಡಲ ಹೋಬಳಿಯ ಪೆರಾಜೆ, ಹಾಕತ್ತೂರು, ಚೆಂಬು, ಮದೆ, ಕೊಳಗದಾಳು, ಬೆಟ್ಟತ್ತೂರು, ಕೋರಂಗಾಲ, ಕಗ್ಗೋಡ್ಲು, ಬೇಂಗೂರು, ಕಾರುಗುಂದ, ತಾವೂರು ಮತ್ತಿತರ ಗ್ರಾಮಗಳ ಅರ್ಹರಿಗೆ ಸಾಗುವಳಿ ಚೀಟಿ ವಿತರಿಸಿದರು.
ಬಳಿಕ ಮಾತನಾಡಿದ ಕೆ.ಜಿ.ಬೋಪಯ್ಯ ಅವರು ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಬರುತ್ತಿರುವ ಕುಟುಂಬಗಳಿಗೆ ಅಕ್ರಮ ಸಕ್ರಮ ಯೋಜನೆಯಡಿ ಸಾಗುವಳಿ ಚೀಟಿ ವಿತರಿಸಲಾಗಿದ್ದು, ಭೂಮಿಯನ್ನು ಯಾರೂ ಮಾರಿಕೊಳ್ಳಬಾರದು ಎಂದರು.
ಸಾಗುವಳಿ ಚೀಟಿ ನೀಡಿದ ಭೂಮಿಯಲ್ಲಿ ಮನೆ ನಿರ್ಮಾಣ, ಕೃಷಿ ಚಟುವಟಿಕೆ ಕೈಗೊಳ್ಳಬಹುದಾಗಿದೆ ಎಂದು ಹೇಳಿದರು.
ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿ ಹಲವು ದಶಕಗಳಿಂದ ಸಾಗುವಳಿ ಚೀಟಿ ಇಲ್ಲದೆ ಉಳುಮೆ ಮಾಡುತ್ತಿರುವ ಕುಟುಂಬ ಗಳಿಗೆ ಅಕ್ರಮ ಸಕ್ರಮ ಯೋಜನೆಯಡಿ ಶಾಸಕ ಕೆ.ಜಿ.ಬೋಪಯ್ಯ ಅವರ ಪ್ರಯತ್ನದಿಂದ ಸಾಗುವಳಿ ಚೀಟಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಬಹಳ ವರ್ಷಗಳ ಹಿಂದೆಯೇ ಹಕ್ಕುಪತ್ರ ವಿತರಿಸಬೇಕಿತ್ತು, ಆದರೆ ಈಗಲಾದರೂ ದೊರೆಯುತ್ತಿದೆ ಎಂದು ಸಮಾಧಾನ ತಂದಿದೆ ಎಂದು ಅವರು ಹೇಳಿದರು.
ತಹಶೀಲ್ದಾರ್ ಪಿ.ಎಸ್.ಮಹೇಶ್ ಅವರು ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ಕುಟುಂಬಗಳಿಗೆ ಸಾಗುವಳಿ ಚೀಟಿ ವಿತರಿಸಲಾಗುತ್ತಿದೆ.
ಹಲವು ಸಮಸ್ಯೆಗಳ ನಡುವೆಯೂ ಅರ್ಹರಿಗೆ ಹಕ್ಕುಪತ್ರ ನೀಡಲು ಕಂದಾಯ ಇಲಾಖೆ ಶ್ರಮಿಸಿದೆ ಎಂದು ತಹಶೀಲ್ದಾರ್ ಹೇಳಿದರು. ಅಕ್ರಮ ಸಕ್ರಮ ಸಮಿತಿ ಸದಸ್ಯ ಸುಬ್ರಮಣ್ಯ ಉಪಾಧ್ಯಾಯ, ತಾ.ಪಂ. ಮಾಜಿ ಸದಸ್ಯ ಅಪ್ರು ರವೀಂದ್ರ, ಶಿರಸ್ತೆದಾರರಾದ ಗುರುರಾಜ್, ದೇವರಾಜ್, ರಮೇಶ್ ಇತರರು ಇದ್ದರು.