ನಾಪೋಕ್ಲು, ಅ. ೮: ನಾಪೋಕ್ಲು ಮಾರುಕಟ್ಟೆಯಲ್ಲಿ ಅಸ್ಸಾಂ ಕಾರ್ಮಿಕರು ವ್ಯಾಪಾರ ಮಾಡುವದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಂತರವೂ ವ್ಯಾಪಾರ ನಡೆಸುವದು ಕಂಡು ಬಂದರೆ ಅವರಿಗೆ ಆಶ್ರಯ ನೀಡಿದ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಟಾಸ್ಕ್ ಪೋರ್ಸ್ ಸಭೆಯಲ್ಲಿ ನಿರ್ಧರಿಸಲಾಯಿತು.

ತಿಂಡಿ, ತಿನಿಸು ಮಾರುವದು, ಹೇರ್‌ಕಟ್ಟಿಂಗ್, ತರಕಾರಿ ಮಾರುವದನ್ನು ಕೂಡ ನಿಷೇಧಿಸಲಾಗಿದೆ. ಅದರೊಂದಿಗೆ ಕಂಬಳಿ, ಬೆಡ್‌ಶೀಟ್ ಸೇರಿದಂತೆ ಇತರ ವ್ಯಾಪಾರ ನಡೆಸುವ ಹೊರ ರಾಜ್ಯದ ಎಲ್ಲಾ ವ್ಯಾಪಾರಸ್ಥರು ತಮ್ಮ ದಾಖಲಾತಿಗಳನ್ನು ಪಂಚಾಯಿತಿಗೆ ನೀಡಬೇಕು. ಮಾರುಕಟ್ಟೆ ಆವರಣದಲ್ಲಿ ಖಾಯಂ ಆಗಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳು ಕೂಡ ತಮ್ಮ ಮಾಹಿತಿಯನ್ನು ಗ್ರಾಮ ಪಂಚಾಯಿತಿಗೆ ನೀಡಬೇಕು. ಅದಕ್ಕೆ ಮಾರುಕಟ್ಟೆ ಸುಂಕ ಹರಾಜು ಪಡೆದವರು ಸಹಕಾರ ನೀಡಬೇಕು ಎಂದು ಸೂಚಿಸಲಾಯಿತು.

ಪಂಚಾಯಿತಿ ವ್ಯಾಪ್ತಿಯ ಬೆಳೆಗಾರರು ತಮ್ಮ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಪೂರ್ಣ ವಿವರ ಮತ್ತು ದಾಖಲಾತಿಗಳನ್ನು ಕಡ್ಡಾಯವಾಗಿ ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಠಾಣೆಗೆ ನೀಡಬೇಕು. ಇಲ್ಲವಾದರೆ ಮುಂದಿನ ಕಾನೂನು ಕ್ರಮಕ್ಕೆ ಬೆಳೆಗಾರರು ಹೊಣೆಯಾಗಬೇಕಾಗುತ್ತದೆ ಎಂದು ಸೂಚನೆ ನೀಡಲಾಯಿತು.

ಸಂತೆ ದಿನವಾದ ಸೋಮವಾರ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಮಾರುಕಟ್ಟೆ ಆವರಣದಲ್ಲಿ ಅಸ್ಸಾಂ ವ್ಯಾಪಾರಸ್ಥರ ತಪಾಸಣೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಎಸ್.ಪಾರ್ವತಿ ವಹಿಸಿದ್ದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಮಹಮ್ಮದ್ ಖುರೇಸಿ, ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ನಾಪೋಕ್ಲು ಹೋಬಳಿ ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರು, ಪೊಲೀಸ್ ಇಲಾಖಾ ಸಿಬ್ಬಂದಿ, ಕಂದಾಯ ಇಲಾಖಾ ಸಿಬ್ಬಂದಿ ಉಪಸ್ಥಿತರಿದ್ದರು.