ಮಡಿಕೇರಿ, ಅ. ೮: ಪೋಷಣ್ ಮಾಸಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಇಲಾಖೆಯ ಮೂಲಕ ಸೆಪ್ಟೆಂಬರ್ ತಿಂಗಳಿನಾದ್ಯAತ ಮೂರ್ನಾಡು ವಲಯ ಹಾಗೂ ಮಡಿಕೇರಿ ಕ.ಸ.ಬ. ವಲಯ ವ್ಯಾಪ್ತಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಯಿತು. ಮಡಿಕೇರಿ ವಲಯದ ೨೩ ಅಂಗನವಾಡಿಗಳು ಹಾಗೂ ಮೂರ್ನಾಡು ವಲಯ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿರುವ ಅಂಗನವಾಡಿಗಳ ವ್ಯಾಪ್ತಿಯಲ್ಲಿ ಆಕರ್ಷಕವಾದ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಲಾಯಿತು. ಪೋಷಣ್ ಮಾಸಾಚರಣೆ ಅಂಗವಾಗಿ ವಿವಿಧ ಜಾಗೃತಿ ಜಾಥಾ, ಸಸಿ ನೆಡುವುದು, ಕೋವಿಡ್-೧೯ರ ಲಸಿಕೆ ಕುರಿತು ಅರಿವು, ವಿವಿಧ ರೀತಿಯ ಸ್ಪರ್ಧೆಗಳು, ರಸಪ್ರಶ್ನೆ, ಆಯುಷ್ ಇಲಾಖೆಯೊಂದಿಗೆ ಸೇರಿ ಆರೋಗ್ಯ ಅರಿವು ಕಾರ್ಯಕ್ರಮಗಳು ಜರುಗಿತು. ಇದರೊಂದಿಗೆ ಸ್ಥಳೀಯ ಆಹಾರ ಮತ್ತು ಸಿರಿಧಾನ್ಯಗಳ ಬಗ್ಗೆ ಆಹಾರ ತಯಾರಿಸಿ ಅರಿವು ಮೂಡಿಸುವ ಕಾರ್ಯಕ್ರಮ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಎನ್.ಆರ್.ಸಿ.ಗೆ ದಾಖಲಿಸುವುದು, ಶಾಲಾ ಮಕ್ಕಳಿಗೆ ಅರಿವು ಕಾರ್ಯಾಗಾರ, ದಿನಗಳ ಮಹತ್ವ, ಸ್ತನ್ಯಪಾನದ ಜಾಗೃತಿ ಕಾರ್ಯಕ್ರಮಗಳನ್ನು ವಿವಿಧೆಡೆಗಳಲ್ಲಿ ನಡೆಸಲಾಯಿತು. ಆಯಾ ವ್ಯಾಪ್ತಿಯಲ್ಲಿನ ಕಾರ್ಯಕ್ರಮಗಳಲ್ಲಿ ಸ್ಥಳೀಯ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಪಿಡಿಓಗಳು ಪಾಲ್ಗೊಂಡಿದ್ದರು. ಇಲಾಖೆಯ ಉಪನಿರ್ದೇಶಕ ಕೆ.ವಿ. ಸುರೇಶ್, ನಿರೂಪಣಾಧಿಕಾರಿ ಪೂಣಚ್ಚ, ಸಿ.ಡಿ.ಪಿ.ಓ. ಆರುಂಧತಿ, ಸಹಾಯಕ ಸಿ.ಡಿ.ಪಿ.ಓ. ಸವಿತಾ ಕೀರ್ತನ್ ಸೇರಿದಂತೆ ಆಯಾ ಅಂಗನವಾಡಿಗಳ ಶಿಕ್ಷಕಿಯರು, ಕಾರ್ಯಕರ್ತೆಯರು ಈ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದರು. ಶಿಕ್ಷಕರಾದ ಕುಮಾರಸ್ವಾಮಿ, ನೂತನ್, ದೇವಕಿ ಸೇರಿದಂತೆ ಹಲವರು ಈ ಕಾರ್ಯಕ್ರಮಗಳಲ್ಲಿ ಅಗತ್ಯ ಸಹಕಾರ ನೀಡುವುದರೊಂದಿಗೆ ಆಕರ್ಷಣೀಯವಾಗಿಯೂ ನಡೆಸಲು ಕೈ ಜೋಡಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.