ಸೋಮವಾರಪೇಟೆ, ಅ. ೮: ಕಾನೂನು ಬಾಹಿರವಾಗಿ ಬಾಡಿಗೆ ಮಾಡುತ್ತಿರುವ ಖಾಸಗಿ ವಾಹನಗಳ ವಿರುದ್ಧ ಪೊಲೀಸ್ ಹಾಗೂ ಆರ್‌ಟಿಓ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಕರ್ನಾಟಕ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘಟನೆ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ವಿನ್ಸೆಂಟ್ ಬಾಬು, ಬಿಳಿ ಬಣ್ಣದ ಫಲಕದ ವಾಹನ ಚಾಲಕರು ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿದ್ದು, ಕಾನೂನು ಬಾಹಿರವಾಗಿ ಬಾಡಿಗೆ ಮಾಡುತ್ತಿದ್ದಾರೆ. ಇಂತಹ ವಾಹನಗಳ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದು ಕೊಳ್ಳಬೇಕೆಂದು ಒತ್ತಾಯಿಸಿದರು.

ಬಿಳಿಯ ಬಣ್ಣದ ಫಲಕದ ಟ್ಯಾಕ್ಸಿ ಚಾಲಕರು ಲಘು ವಾಹನಗಳ ಮೂಲಕ ಬಾಡಿಗೆ ಮಾಡುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಸರ್ಕಾರಕ್ಕೆ ತೆರಿಗೆ ಪಾವತಿಸುವ ಹಳದಿ ಬಣ್ಣದ ಫಲಕದ ಟ್ಯಾಕ್ಸಿಗಳು ಬಾಡಿಗೆ ಇಲ್ಲದೆ ನಷ್ಟ ಅನುಭವಿಸುತ್ತಿವೆ.

ಸಂಬAಧಪಟ್ಟ ಇಲಾಖೆಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟ ತಡೆಗಟ್ಟಲು ಹಾಗೂ ಹಳದಿ ಬೋರ್ಡ್ ವಾಹನ ಚಾಲಕರು ಹಾಗೂ ಮಾಲೀಕರ ಜೀವನ ಸರಿಪಡಿಸಲು ಪೊಲೀಸ್ ಇಲಾಖೆ ಕೂಡಲೇ ತಂಡಗಳನ್ನು ರಚಿಸಿ ಬಿಳಿ ಬಣ್ಣದ ಫಲಕದ ಟ್ಯಾಕ್ಸಿಗಳ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ತಾಲೂಕು ಘಟಕದ ಅಧ್ಯಕ್ಷ ಬಿ.ವಿ. ರವಿ, ಕಾರ್ಯದರ್ಶಿ ಕೆ.ಆರ್. ಮಂಜುನಾಥ್, ಜಿಲ್ಲಾ ಗೌರವಾಧ್ಯಕ್ಷ ರಫೀಕ್, ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಕೆ.ಎಸ್. ಶಿವ ಇದ್ದರು.