ಪೊನ್ನಂಪೇಟೆ, ಅ. ೮: ಅರಣ್ಯ ಮತ್ತು ಜೀವ ಸಂಕುಲ, ಜನರು ಮತ್ತು ಭೂಮಿಯ ಉಳಿಕೆ ಮತ್ತು ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೊಡಗು ಅರಣ್ಯ ವೃತ್ತ, ಮಡಿಕೇರಿ ವನ್ಯಜೀವಿ ವಿಭಾಗದ ವತಿಯಿಂದ ಆಚರಿಸಲಾಗುತ್ತಿರುವ ೬೭ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಸ್ವಚ್ಛ ಭಾರತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಪ್ರಯುಕ್ತ ಶ್ರೀಮಂಗಲ ಅರಣ್ಯ ವಲಯ ವ್ಯಾಪ್ತಿಯ ಇರ್ಪು ಜಲಪಾತ ಹಾಗೂ ಜಲಪಾತಕ್ಕೆ ತೆರಳುವ ಮಾರ್ಗದಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು.
ಅರಣ್ಯ ಇಲಾಖೆ ಹಾಗೂ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಹಯೋಗದೊಂದಿಗೆ ನಡೆದ ಸ್ವಚ್ಛತಾ ಕಾರ್ಯದ ಸಂದರ್ಭ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದಂತೆ ಹಾಗೂ ಪರಿಸರವನ್ನು ಸ್ವಚ್ಛವಾಗಿ ಇಡುವಂತೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭ ಶ್ರೀಮಂಗಲ ಅರಣ್ಯ ವನ್ಯ ಜೀವಿ ವಲಯ ಆರ್ಎಫ್ಓ ವೀರೇಂದ್ರ, ಶ್ರೀಮಂಗಲ ಪೊಲೀಸ್ ಠಾಣಾಧಿಕಾರಿ ರವಿ ಶಂಕರ್, ಶ್ರೀಮಂಗಲ ವೈದ್ಯಾಧಿಕಾರಿ ಡಾ. ಕವನ್, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಉಪನ್ಯಾಸಕರು, ಪ್ರವಾಸಿಗರು ಹಾಗೂ ಅರಣ್ಯ ಸಿಬ್ಬಂದಿಗಳು ಇದ್ದರು.