ವೀರಾಜಪೇಟೆ, ಅ. ೬: ಕರ್ನಾಟಕ ಸರ್ಕಾರ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕೊಡಗು ಜಿಲ್ಲೆ, ಪಶುವೈದ್ಯಕೀಯ ಆಸ್ಪತ್ರೆ ವೀರಾಜಪೇಟೆ ಮತ್ತು ಪಟ್ಟಣ ಪಂಚಾಯಿತಿ ವೀರಾಜಪೇಟೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ವಿಶ್ವ ರೇಬೀಸ್ ದಿನಾಚರಣೆಯನ್ನು ನಗರದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯಲ್ಲಿರುವ ಪಶು ವೈದ್ಯ ಆಸ್ಪತ್ರೆಯ ಆವರಣದಲ್ಲಿ ಸರಳ ರೀತಿಯಲ್ಲಿ ಆಚರಿಸಲಾಯಿತು. ಸಾಕು ನಾಯಿಗಳಿಗೆ ರೇಬೀಸ್ ಚುಚ್ಚುಮದ್ದು ನೀಡುವ ಮೂಲಕ ಕಾರ್ಯಕ್ರಮ ಚಾಲನೆ ನೀಡಿ ಬಳಿಕ ಮಾತನಾಡಿದ ಸಹಾಯಕ ವೈದ್ಯಾಧಿಕಾರಿಗಳಾದ ಡಾ. ತಮ್ಮಯ್ಯ ಎ.ಬಿ. ಅವರು ಸಾಕು ಪ್ರಾಣಿಗಳಿಗೆ ರೇಬೀಸ್ ಹರಡದಂತೆ ಚುಚ್ಚು ಮದ್ದು ಸರ್ಕಾರದ ವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ. ನಾಯಿ ಹುಚ್ಚಿನಿಂದ ಪ್ರಾಣಹಾನಿ ಸಂಭವವಿರುವುದು ಹೆಚ್ಚು. ಆದ್ದರಿಂದ ಮನೆಯಲ್ಲಿ ಸಾಕುವ ನಾಯಿಗಳಿಗೆ ರೇಬೀಸ್ ಚುಚ್ಚುಮದ್ದು ಪಡೆಯುವುದು ಸೂಕ್ತ
ಕಾರ್ಯಕ್ರಮದಲ್ಲಿ ನಗರ ಸೇರಿದಂತೆ ಗ್ರಾಮೀಣ ಭಾಗಗಳಿಂದ ೧೦೦ಕ್ಕಿಂತ ಹೆಚ್ಚು ಮಂದಿ ತಮ್ಮ ಸಾಕು ಪ್ರಾಣಿಗಳಿಗೆ ರೇಬೀಸ್ ನಿರೋಧಕ ಚುಚ್ಚು ಮದ್ದು ಹಾಕಿಸಿಕೊಂಡರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿಯ ಅಧ್ಯಕ್ಷೆ ಜೂನಾ ಸುನೀತ, ವೈದ್ಯಾಧಿಕಾರಿಗಳಾದ ಡಾ. ಲತ ಎಂ.ಸಿ., ವೇಣುಗೋಪಾಲ್ ಕೆ.ಕೆ. ಮತ್ತು ಪಶುವೈದ್ಯಕೀಯ ಇಲಾಖೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.