ಸೋಮವಾರಪೇಟೆ, ಅ. ೭: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೬೮ನೇ ವಾರ್ಷಿಕ ಮಹಾಸಭೆ ಸಾಕ್ಷಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಹೆಚ್.ಕೆ. ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ವಾರ್ಷಿಕವಾಗಿ ರೂ. ೨೯೨.೬೮ ಕೋಟಿ ವ್ಯವಹಾರ ನಡೆಸಿದ್ದು, ೧೦೮.೧೯ ಲಕ್ಷಗಳ ನಿವ್ವಳ ಲಾಭ ಗಳಿಸಿದೆ. ೨೦೨೦-೨೧ ಸಾಲಿಗೆ ಸದಸ್ಯರಿಗೆ ಶೇ.೨೦ ರ ಡಿವಿಡೆಂಡ್ ನೀಡಲು ತೀರ್ಮಾನಿಸಿರುವುದಾಗಿ ತಿಳಿಸಿದರು.
ಸಂಘದಲ್ಲಿ ೪೩೬೪ ಸದಸ್ಯರಿದ್ದು, ಒಟ್ಟು ೪೧೦೩.೫೮ ಲಕ್ಷ ರೂ. ಸಾಲ ವಿತರಿಸಲಾಗಿದೆ. ಶೇ. ೯೬.೪೮ ಸಾಲ ಮರುಪಾವತಿಯಾಗಿದೆ. ಒಟ್ಟು ೩೪೭೫ ಲಕ್ಷ ಠೇವಣಿ ಇದೆ. ಸಂಘದಲ್ಲಿ ಜಾಮೀನು ಸಾಲದ ವಿಮಾ ಯೋಜನೆ ಜಾರಿಯಲ್ಲಿದೆ. ಪೌತಿದಾರರಾದ ಸಾಲಗಾರರ ಸಾಲ ಮನ್ನಾವಾಗಲಿದೆ ಎಂದರು. ೫ ಸ್ವ ಸಹಾಯ ಗುಂಪು ಗಳಿಗೆ ೨೩ ಲಕ್ಷ ರೂ.ಗಳ ಸಾಲ ವಿತರಿಸ ಲಾಗಿದೆ. ಸಂಘದ ಸದಸ್ಯರ ಉಪಯೋಗಕ್ಕಾಗಿ ಅಬ್ಬೂರುಕಟ್ಟೆ ಗ್ರಾಮದಲ್ಲಿ ರೂ. ೧ ಕೋಟಿ ವೆಚ್ಚದ ಗೋದಾಮು ನಿರ್ಮಿಸಲಾಗುತ್ತಿದೆ ಎಂದರು. ಕೋವಿಡ್-೧೯ರಿಂದಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ತುರ್ತು ಅವಶ್ಯಕತೆಯನ್ನು ಮನಗಂಡು ರೂ. ೭೦ ಸಾವಿರ ವೆಚ್ಚದಲ್ಲಿ ಕುಡಿಯುವ ಬಿಸಿ ಹಾಗೂ ತಣ್ಣೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಘದ ಸದಸ್ಯರಿಗೆ ವೈಯುಕ್ತಿಕ ಅಪಘಾತ ವಿಮೆಯನ್ನು ರೂ. ೩೦ ವಾರ್ಷಿಕ ವಂತಿಕೆಯಲ್ಲಿ ರೂ. ೫೦ ಸಾವಿರ ನೀಡಲು ತೀರ್ಮಾನಿಸಲಾಗಿದೆ.
ಸದಸ್ಯರಿಗೆ ಸಾಲದ ಮಿತಿಯನ್ನು ರೂ. ೨೫ ಲಕ್ಷದಿಂದ ರೂ. ೪೦ ಲಕ್ಷದ ವರೆಗೆ ಹೆಚ್ಚಿಸಿ ನೀಡಲಾಗುತ್ತಿದೆ. ಇದರೊಂದಿಗೆ ಇನ್ನೂ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಸದಸ್ಯರು ಸದುಪಯೋಗಪಡಿಸಿ ಕೊಳ್ಳಬೇಕೆಂದರು. ಈಗಾಗಲೇ ಸಂಘಕ್ಕೆ ೧೦೨ ವರ್ಷಗಳು ತುಂಬಿದ್ದು, ಮುಂದಿನ ಮಾರ್ಚ್ ಒಳಗೆ ಶತಮಾನೋತ್ಸವ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
ಉಪಾಧ್ಯಕ್ಷ ಬಿ.ಎಂ. ಈಶ್ವರ್, ಬಿ.ಎಂ. ಸುರೇಶ್, ಜಿ.ಬಿ. ಸೋಮಯ್ಯ, ಪಿ.ಡಿ. ಮೋಹನ್‌ದಾಸ್, ಬಿ.ಡಿ. ಮಂಜುನಾಥ್, ಕೆ.ಕೆ. ಚಂದ್ರಿಕಾ, ರೂಪ ಸತೀಶ್, ಪಿ.ಎ. ಅನಿತಾ, ಎಚ್.ಕೆ. ಚಂದ್ರಶೇಖರ್, ಬಿ. ಶಿವಪ್ಪ, ಎಂ.ವಿ. ದೇವರಾಜ್, ಬಿ.ಪಿ. ದಿವಾನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಪಿ. ರವೀಂದ್ರ ಇದ್ದರು.