ವೀರಾಜಪೇಟೆ, ಅ. ೭: ರೈತರ ಅಭಿವೃದ್ಧಿಗೆ ಕೃಷಿ ಮಾಹಿತಿಯ ಜೊತೆಗೆ ಮಣ್ಣು ಮತ್ತು ನೀರು ಪರಿಕ್ಷೇಯ ಮೌಲ್ಯ ಸೇವೆಗಳು, ಹೊಸ ತಂತ್ರಜ್ಞಾನದ ಬಳಕೆ ಬಗ್ಗೆ ಓಡಿಪಿ ಸಂಸ್ಥೆ ವತಿಯಿಂದ ಕೃಷಿಗೆ ಬೇಕಾದ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದಾಗಿ ಓಡಿಪಿ ಸಂಸ್ಥೆಯ ರೈತ ಉತ್ಪನ್ನ ಕೂಟದ ಸಂಯೋಜಕ ಮೈಸೂರಿನ ಜಾನ್ ಬಿ. ರಾಡ್ರಿಗಾಸ್ ಹೇಳಿದರು.
ವೀರಾಜಪೇಟೆ ಬಳಿಯ ಹಾತೂರು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಓಡಿಪಿ ಸಂಸ್ಥೆ ಮತ್ತು ಅಂದೇರಿ ಹಿಲ್ಪೆ ಜರ್ಮನಿ ನೇತೃತ್ವದಲ್ಲಿ ರಚನೆಯಾದ ರೈತ ಒಕ್ಕೂಟದ ರೈತರಿಗೆ ಕೃಷಿ ಮಾಹಿತಿ ಮತ್ತು ನೋಂದಾಯಿತ ಸದಸ್ಯರಿಗೆ ಉಚಿತ ರಸಗೊಬ್ಬರ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಜಾನ್ ಬಿ. ರಾಡ್ರಿಗಸ್ ಅವರು ರೈತರ ಅಭಿವೃದ್ಧಿಗಾಗಿ ಓಡಿಪಿ ಸಂಸ್ಥೆಯು ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ೩೦ ರೈತ ಉತ್ಪನ್ನ ಕೂಟಗಳನ್ನು ಆರಂಭ ಮಾಡಿದ್ದು ರೈತರ ಅನುಕೂಲಕ್ಕಾಗಿ ಒಕ್ಕೂಟದ ಮೂಲಕ ನಮ್ಮ ಸಂಸ್ಥೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದಾಗಿ ಹೇಳಿದರು. ಕೃಷಿ ಮಾಹಿತಿ ಮತ್ತು ರಸಗೊಬ್ಬರ ವಿತರಣೆ ಸಂದರ್ಭ ಹಾತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್ ಪೂವಣ್ಣ, ಸದಸ್ಯರಾದ ಕೆ.ಡಿ. ಗಣಪತಿ, ಲವ ಭೀಮಯ್ಯ, ಅವರುಗಳು ಭಾಗವಹಿಸಿ ಮಾತನಾಡಿ ಕಡಿಮೆ ದರದಲ್ಲಿ ದೊರೆಯುವಂತ ಸೌಲಭ್ಯಗಳನ್ನು ಪಡೆದುಕೊಳ್ಳಲು ರೈತರು ಮುಂದೆ ಬರುವಂತೆ ಕರೆ ನೀಡಿದರು. ಸ್ಥಳೀಯವಾಗಿ ರೈತ ಒಕ್ಕೂಟವನ್ನು ಮುನ್ನೆಡೆಸಲು ಸಭೆಯಲ್ಲಿ ಕೃಷಿ ಉತ್ಪಾದಕರ ಸಮಿತಿಯನ್ನು ರಚನೆ ಮಾಡಲಾಯಿತು. ಓಡಿಪಿ ಸಂಸ್ಥೆಯ ಕಾರ್ಯಕರ್ತೆ ರೀಟಾ ಜೋಸೆಫ್ ಪ್ರಾಸ್ಥಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖಂಡರಾದ ಮಾಲ, ರಾಣಿ, ಸಂಘದ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.