ಮಡಿಕೇರಿ, ಅ. ೬; ಅಪರೂಪದ ಪ್ರಕರಣವೊಂದರಲ್ಲಿ ತಮ್ಮ ಕಾರ್ಯ ವ್ಯಾಪ್ತಿಯ ಹೊರತಾದ ಪ್ರದೇಶಕ್ಕೆ ದಾಳಿ ನಡೆಸಿ ಫಸಲು ಕೊಡುವ ಕೃಷಿ ಗಿಡಗಳನ್ನು ಕಡಿದು ನಾಶಗೊಳಿಸಿದ ಕಾರಣಕ್ಕಾಗಿ ಅರಣ್ಯಾಧಿಕಾರಿ ಸೇರಿದಂತೆ
ನಾಲ್ವರು ಸಿಬ್ಬಂದಿಗಳ ಮೇಲೆ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ವಿಶೇಷವೆಂದರೆ ಘಟನೆ ನಡೆದು ಒಂದು
ವರ್ಷದ ಬಳಿಕ ಪ್ರಕರಣ ದಾಖಲಾಗಿದೆ.
ಸುಳ್ಯ ಫಾರೆಸ್ಟರ್ ಚಂದ್ರಶೇಖರ (ಚಂದ್ರು), ಗಾರ್ಡ್ ಚಿದಾನಂದ ಹಾಗೂ ಅರಣ್ಯವೀಕ್ಷಕರಾದ ಸುಂದರ ಕೆ. ಮತ್ತು ಮನೋಜ್ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ : ಮಡಿಕೇರಿ ತಾಲೂಕು, ಸಂಪಾಜೆ ಹೋಬಳಿ ಎಂ. ಚೆಂಬು ಗ್ರಾಮ ನಿವಾಸಿ ಸಿ.ಆರ್. ಪುರುಷೋತ್ತಮ ಎಂಬವರು ಸ.ನಂ. ೧೫೫/೧ಪಿ೮೭ರಲ್ಲಿ ೨.೪೫ ಎಕರೆ ಜಾಗದಲ್ಲಿ ಅಡಿಕೆ, ಕಾಫಿ, ಕರಿಮೆಣಸು, ಗೇರು ಕೃಷಿ ಮಾಡಿಕೊಂಡು ನೆಲೆಸಿದ್ದಾರೆ. ಕಂದಾಯ
(ಮೊದಲ ಪುಟದಿಂದ) ಇಲಾಖೆಗೆ ಸೇರಿದ ಪೈಸಾರಿ ಜಾಗವಾಗಿದ್ದು, ಮಂಜೂರಾತಿಗಾಗಿ ಪುರುಷೋತ್ತಮ ಕಳೆದ ಎರಡು ವರ್ಷದ ಹಿಂದೆ ಅಕ್ರಮ ಸಕ್ರಮ ಯೋಜನೆಯಡಿ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದ್ದರು. ಇನ್ನೂ ಮಂಜೂರಾತಿ ಆಗಿರುವುದಿಲ್ಲ. ಈ ನಡುವೆ ಕಳೆದ ತಾ. ೧೮.೭.೨೦೨೦ರಂದು ಅರಣ್ಯ ಇಲಾಖೆಯ ಸುಳ್ಯ ಉಪ ವಲಯ ಅರಣ್ಯಾಧಿಕಾರಿ ಚಂದ್ರಶೇಖರ, ಅರಣ್ಯ ರಕ್ಷಕ ಮನೋಜ್, ವೀಕ್ಷಕರುಗಳಾದ ಕೆ. ಸುಂದರ ಹಾಗೂ ಚಿದಾನಂದ ಎಂಬವರುಗಳು ಅಕ್ರಮ ಪ್ರವೇಶ ಮಾಡಿ ಸುಳ್ಯ ವಿಭಾಗಕ್ಕೆ ಸೇರಿದ ಸ.ನಂ. ೧೦೮ರ ಅರಣ್ಯ ಇಲಾಖಾ ಜಾಗದಲ್ಲಿ ಕೃಷಿ ನಡೆಸಿರುವುದಾಗಿ ಆರೋಪಿಸಿ ಏಕಾಏಕಿ ೬೦ ಬಾಳೆಗಿಡ, ಫಸಲು ನೀಡುತ್ತಿದ್ದ ಸುಮಾರು ೬೦೦ ಕಾಫಿ ಗಿಡಗಳನ್ನು ಕಡಿದು ನಾಶಪಡಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಪುರುಷೋತ್ತಮ ಅವರ ಸಹೋದರ ವಾಸುದೇವ ಅವರಿಗೆ ನಿನ್ನನ್ನೂ ಕೊಲ್ಲುವದಾಗಿ ಅಧಿಕಾರಿಗಳು ಜೀವ ಬೆದರಿಕೆ ಒಡ್ಡಿದ್ದರು. ಈ ಸಂಬAಧ ಪುರುಷೋತ್ತಮ ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದರು. ಪುರುಷೋತ್ತಮ ಅವರ ಸತತ ಪ್ರಯತ್ನ ಹಾಗೂ ಮೇಲಧಿಕಾರಿಗಳು, ಜನಪ್ರತಿನಿಧಿಗಳು ಸೂಚನೆ ನೀಡಿದ ಬಳಿಕ ಈ ಸಂಬAಧ ಅಂದು ವೃತ್ತ ನಿರೀಕ್ಷಕರಾಗಿದ್ದ ದಿವಾಕರ್ ಅವರು ಅರಣ್ಯಾಧಿಕಾರಿಗಳನ್ನು ಕರೆಸಿ ವಿಚಾರಿಸಿದಾಗ ಜಾಗ ಸುಳ್ಯ ಅರಣ್ಯ ಇಲಾಖಾ ವ್ಯಾಪ್ತಿಗೆ ಸೇರಿದ್ದಾಗಿರುವದಾಗಿ ಅಧಿಕಾರಿಗಳು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವೃತ್ತ ನಿರೀಕ್ಷಕರು ಈ ಸಂಬAಧ ಜಂಟಿ ಸರ್ವೆಗೆ ಕಂದಾಯ ಇಲಾಖೆಗೆ ಪತ್ರ ಬರೆದಿದ್ದರು.
ಜಂಟಿ ಸರ್ವೆಯಲ್ಲಿ ವ್ಯಾಪ್ತಿ ಬದಲು
ಬಳಿಕ ನಡೆದ ಬೆಳವಣಿಗೆಯಲ್ಲಿ ಪುರುಷೋತ್ತಮ ಅವರು ಮೂರು ಬಾರಿ ಸರ್ವೆ ಮಾಡಿಸಿದಾಗಲೂ ಕಂದಾಯ ಇಲಾಖೆ ಜಾಗವೆಂದು ಕಂಡು ಬಂದಿದೆ. ಅರಣ್ಯ, ಕಂದಾಯ ಮತ್ತು ಪೊಲೀಸ್ ಇಲಾಖೆ ಜಾಗದ ಜಂಟಿ ಸರ್ವೇ ನಡೆಸಿದಾಗ ಪುರುಷೊತ್ತಮ ಅವರು ಕೃಷಿ ಮಾಡಿಕೊಂಡಿರುವ ಜಾಗ ಸುಳ್ಯ ಅರಣ್ಯ ಅಧಿಕಾರಿಯ ಗಸ್ತು ವ್ಯಾಪ್ತಿಯಿಂದ ಹೊರಗಿದ್ದು, ಸುಳ್ಯ ಬದಲಾಗಿ ಮಡಿಕೇರಿ ತಾಲೂಕು ಕಂದಾಯ ವ್ಯಾಪ್ತಿಯದ್ದೆಂದು ಕಂಡು ತಿಳಿದು ಬಂದಿದೆ. ಕಳೆದ ತಾ. ೧೬.೯.೨೦೨೦ ರಂದು ಸರ್ವೆ ಕಾರ್ಯ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಇದು ಅಧಿಕಾರಿಗಳ ನಿಯಮಬಾಹಿರ ನಡೆಯನ್ನು ಪುಷ್ಟೀಕರಿಸಿದೆ. ಈ ಹಿನ್ನೆಲೆಯಲ್ಲಿ ಇದೀಗ ಮತ್ತೆ ಒಂದು ವರ್ಷದ ಬಳಿಕ ಪುರುಷೋತ್ತಮ್ ಅವರು ದಾಖಲೆ ಸಹಿತ ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸ್ ನಿರೀಕ್ಷಕ ರವಿಕಿರಣ್ ಅವರು ಅರಣ್ಯಾಧಿಕಾರಿಗಳ ಮೇಲೆ ಕೊಲೆ ಬೆದರಿಕೆ, ಕೃಷಿನಾಶ ಮತ್ತಿತರ ಕಲಂನಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
? ಕುಡೆಕಲ್ ಸಂತೋಷ್