ಕುಶಾಲನಗರ, ಅ. ೫: ಉತ್ತರ ಪ್ರದೇಶದಲ್ಲಿ ರೈತರ ಮೇಲೆ ವಾಹನ ಚಲಾಯಿಸುವ ಮೂಲಕ ರೈತರ ಹತ್ಯೆ ಮತ್ತು ಪ್ರಿಯಾಂಕಾ ಗಾಂಧಿ ವಾದ್ರರನ್ನು ಬಂಧಿಸಿದ ಪ್ರಕರಣ ಖಂಡಿಸಿ ಕುಶಾಲನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಿತು.

ಸ್ಥಳೀಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪಕ್ಷದ ಪ್ರಮುಖರಾದ ಶಶಿಧರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ವಿರುದ್ಧ ಘೋಷಣೆ ಕೂಗಿದರು. ತಕ್ಷಣ ಪಕ್ಷದ ಮುಖಂಡರಾದ ಪ್ರಿಯಾಂಕಾ ಗಾಂಧಿಯನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು. ಪಕ್ಷದ ಬ್ಲಾಕ್ ಮಟ್ಟದ ಕಾರ್ಯಕರ್ತರು, ಯುವ ಘಟಕದ ಪ್ರಮುಖರು ಇದ್ದರು.

ಸಿದ್ದಾಪುರ: ಶಾಂತಿಯುತ ಧರಣಿ ನಿರತ ಉತ್ತರ ಪ್ರದೇಶದ ರೈತರ ಮೇಲೆ ವಾಹನ ಚಲಾಯಿಸಿದ ಪ್ರಕರಣವನ್ನು ಖಂಡಿಸಿ ಸಿದ್ದಾಪುರದಲ್ಲಿ ಸಿಪಿಐ(ಎಂ) ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಸಿಪಿಐ(ಎಂ) ಮುಖಂಡ ಎನ್.ಡಿ. ಕುಟ್ಟಪ್ಪ ಸೇರಿದಂತೆ ಇನ್ನಿತರರು ಘಟನೆಯನ್ನು ಖಂಡಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡ ಹೆಚ್.ಬಿ. ರಮೇಶ್, ಕಾಂಗ್ರೆಸ್ ಪಕ್ಷದ ಪ್ರತೀಶ್, ಪಳನಿಸ್ವಾಮಿ ಹಾಗೂ ಗ್ರಾ.ಪಂ. ಸದಸ್ಯರುಗಳು, ಪಕ್ಷದ ಪದಾಧಿಕಾರಿಗಳು ಹಾಜರಿದ್ದರು.