ಮಡಿಕೇರಿ, ಅ. ೬: ಮಡಿಕೇರಿ ನಗರಸಭೆಗೆ ಕೊನೆಗೂ ಚುನಾಯಿತ ಜನಪ್ರತಿನಿಧಿಗಳ ಆಡಳಿತಕ್ಕೆ ವೇದಿಕೆ ಸಿದ್ಧವಾಗಲಿದ್ದು, ಇದಕ್ಕೆ ಮುಹೂರ್ತ ನಿಗದಿಯಾಗಿದೆ. ತಾ. ೧೧ ರಂದು ನೂತನ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಸರಕಾರದಿಂದ ಬಂದಿರುವ ನಿರ್ದೇಶನದಂತೆ ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು ಅವರನ್ನು ಚುನಾವಣಾಧಿಕಾರಿಗಳನ್ನಾಗಿ ನೇಮಕ ಮಾಡಿದ್ದು, ಇದೀಗ ಚುನಾವಣೆ ನಡೆಸಲು ದಿನಾಂಕ ನಿಗದಿ ಮಾಡಿ ಸದಸ್ಯರುಗಳಿಗೆ, ಶಾಸಕರುಗಳಿಗೆ, ಸಂಸದರಿಗೆ ಮಾಹಿತಿ ನೀಡಲಾಗಿದೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೆ ನಿಗದಿಯಾಗಿದೆ. ೨೩ ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿ ೧೬, ಎಸ್‌ಡಿಪಿಐ ೫ ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದೊAದು ಸದಸ್ಯರನ್ನು ಹೊಂದಿದೆ.

ತಾ. ೧೧ ರಂದು ಅಪರಾಹ್ನ ೨ ಗಂಟೆಯಿAದ ಚುನಾವಣಾ ಸಭೆ ನಗರಸಭಾ ಸಭಾಂಗಣದಲ್ಲಿ ಪ್ರಾರಂಭವಾಗಲಿದೆ. ಅಂದು ಬೆಳಿಗ್ಗೆ ೧೦ ಗಂಟೆಯಿAದ ೧೨ ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಅಪರಾಹ್ನ ೨ ಗಂಟೆಗೆ ಚುನಾವಣಾ ಸಭೆ ಪ್ರಾರಂಭದ ಬಳಿಕ ನಾಮಪತ್ರ ಪರಿಶೀಲನೆ ಹಾಗೂ ಇದಾದ ನಂತರ ಹಿಂಪಡೆಯಲು ಅವಕಾಶವಿದೆ. ಸ್ಪರ್ಧೆ ಏರ್ಪಟ್ಟಲ್ಲಿ ಹಾಜರಾಗಿರುವ ನಗರಸಭೆಯ ಸದಸ್ಯರುಗಳು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಲೋಕಸಭಾ ಸದಸ್ಯರು ಕೈ ಎತ್ತುವ ಮೂಲಕ ಮತ ನೀಡಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಮಾಡಬಹುದಾಗಿದೆ.