ಮಡಿಕೇರಿ, ಅ. ೫: ತಲಕಾವೇರಿಯಲ್ಲಿ ತೀರ್ಥೋದ್ಭವದ ಸಂದರ್ಭ ಭಕ್ತರಿಗೆ ಪ್ರವೇಶಕ್ಕೆ ಹೇರಿರುವ ನಿರ್ಬಂಧವನ್ನು ಸಡಿಲ ಗೊಳಿಸುವ ಕುರಿತು ಚರ್ಚೆಗಾಗಿ ಬುಧವಾರ (ಇಂದು) ಮತ್ತೆ ಸಭೆಯೊಂದು ನಡೆಯಲಿದೆ. ಈ ಕುರಿತಾಗಿ ತಾನು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿರುವುದಾಗಿ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ‘ಶಕ್ತಿ’ಗೆ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬುಧವಾರ ಸಚಿವರು ಮಧ್ಯಾಹ್ನ ೩ ಗಂಟೆಗೆ ಜಿಲ್ಲಾಧಿಕಾರಿ ಯವರ ಕಚೇರಿಯಲ್ಲಿ ಶಾಸಕರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಈ ಮೂಲಕ ಗೊಂದಲ ಬಗೆಹರಿಯಲಿದೆ ಎಂದು ರಂಜನ್ ಮಾಹಿತಿಯಿತ್ತಿದ್ದಾರೆ.
ಅಲ್ಲದೆ ತಾನು ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೊಂದಿಗೂ ದೂರವಾಣಿ ಮೂಲಕ ಮಾತನಾಡಿದ್ದು, ಭಕ್ತಾದಿಗಳಿಗೆ ವಿಧಿಸಿರುವ ನಿರ್ಬಂಧವನ್ನು ಸಡಿಲಗೊಳಿಸಲು ಮನವಿ ಮಾಡಿದುದಾಗಿಯೂ ಶಾಸಕರು ತಿಳಿಸಿದ್ದಾರೆ.