*ಗೋಣಿಕೊಪ್ಪ, ಅ. ೫: ಚಾಮುಂಡೇಶ್ವರಿ ದೇವಿಯನ್ನು ಆರಾಧಿಸುವ ಮೂಲಕ ಗೋಣಿಕೊಪ್ಪ ೪೩ನೇ ವರ್ಷದ ದಸರಾ ಜನೋತ್ಸವವನ್ನು ಆಚರಿಸಲು ಶ್ರೀ ಕಾವೇರಿ ದಸರಾ ಸಮಿತಿ ನಿರ್ಧರಿಸಿದೆ.
ಶಾಸಕ ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಕೆ.ವಿ.ಕೆ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ದಸರಾ ಸಮಿತಿ ಹಾಗೂ ದಶಮಂಟ ಪಗಳ ಸಮಿತಿ ಪದಾಧಿಕಾರಿಗಳ ಸಮ್ಮುಖದಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಕೋವಿಡ್ ಹಿನ್ನೆಲೆಯಲ್ಲಿ ಜನಸಂದಣಿಯನ್ನು ನಿಯಂತ್ರಿಸುವ ಕಾರಣದಿಂದ ಕಳೆದ ವರ್ಷದಂತೆ ಪ್ರಸ್ತುತ ವರ್ಷವೂ ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ ಧಾರ್ಮಿಕ ಆಚರಣೆಗಷ್ಟೇ ಒತ್ತು ನೀಡಿ ದಸರಾ ಆಚರಿಸುವುದು ಉತ್ತಮ ಬೆಳವಣಿಗೆ ಎಂದು ಶಾಸಕರು ಕಾವೇರಿ ದಸರಾ ಸಮಿತಿಗೆ ಸಲಹೆ ನೀಡಿದರು.
ಪ್ರತಿವರ್ಷ ಸಾಂಸ್ಕöÈತಿಕ ಕಾರ್ಯಕ್ರಮ ನಡೆಸುವ ಮೈದಾನವನ್ನು ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಯೋಜನೆ ರೂಪಿಸಿದ್ದು, ಹೆಚ್ಚಿನ ಅನುದಾನದೊಂದಿಗೆ ದಸರಾ ಆಚರಣೆಗೆ ಬರುವ ಅನುದಾನವನ್ನು ಕ್ರೀಡಾಂಗಣಕ್ಕೆ ಬಳಸಿಕೊಳ್ಳುವ ಚಿಂತನೆ ಇದೆ ಎಂದು ಸಭೆಗೆ ಶಾಸಕರು ತಿಳಿಸಿದರು. ನವರಾತ್ರಿ ದಿನದಂದು ಸಮಿತಿಯ ಚಾಮುಂಡೇಶ್ವರಿ ದೇವಿಯ ವಿಗ್ರಹ ಮೆರವಣಿಗೆಗೆ ಮಾತ್ರ ಸೀಮಿತಗೊಳಿಸಲಾಗುವುದು. ದೇವಿಯ ವಿಸರ್ಜನೆಯನ್ನು ೧೦:೩೦ ಗಂಟೆಯೊಳಗೆ ನಡೆಸುವಂತೆ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು. ನಿತ್ಯ ದೇವಿಯ ಪೂಜೆಗೆ ದಶಮಂಟಪಗಳ ಸಮಿತಿಗೆ ಒಂದು ದಿನದ ಅವಕಾಶವನ್ನು ನೀಡುವಂತೆ ಶ್ರೀ. ಕಾವೇರಿ ದಸರಾ ಸಮಿತಿ ಅನುವು ಮಾಡಿಕೊಟ್ಟಿರುವುದಾಗಿ ತಿಳಿಸಿತು.
ಗ್ರಾ.ಪಂ. ಅಧ್ಯಕ್ಷೆ ಚೈತ್ರಾ ಬಿ. ಚೇತನ್, ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ, ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ತಾಲೂಕು ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ತಾಲೂಕು ಪೊಲೀಸ್ ಉಪವರಿಷ್ಠಾಧಿ ಕಾರಿ ಜಯಕುಮಾರ್, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕೆ.ಜಿ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಜಿಮ್ಮಸುಬ್ಬಯ್ಯ, ದಶ ಮಂಟಪಗಳ ಸಮಿತಿ ಅಧ್ಯಕ್ಷ ಕಾಡ್ಯಮಾಡ ಚೇತನ್ ಸೇರಿದಂತೆ ದಸರಾ ಸಮಿತಿ ಪದಾಧಿಕಾರಿಗಳು, ದಶ ಮಂಟಪಗಳ ಅಧ್ಯಕ್ಷರು ಹಾಗೂ ತಾಲೂಕು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.