ಗೋಣಿಕೊಪ್ಪ, ಅ. ೪: ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಧನುಗಾಲ ಗ್ರಾಮದ ನಿವೃತ್ತ ಶಿಕ್ಷಕಿ ನಂಜಮ್ಮ ಅವರ ಮನೆಯಲ್ಲಿ ಹಾಡಹಗಲೇ ಕಳ್ಳತನ ಮಾಡಿದ್ದ ಆರೋಪಿತರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಗೋಣಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾಯಮುಡಿ ಧನುಗಾಲ ಗ್ರಾಮದ ನಿವೃತ್ತ ಶಿಕ್ಷಕಿ ನಂಜಮ್ಮ ಅವರು ತಾ. ೧೩.೦೨.೨೦೨೧ರಂದು ಬೆಳಿಗ್ಗೆ ೭.೩೦ ಗಂಟೆಗೆ ಮನೆಗೆ ಬೀಗಹಾಕಿಕೊಂಡು ಚಿಕಿತ್ಸೆ ಬಗ್ಗೆ ಮೈಸೂರಿಗೆ ಹೋಗಿದ್ದು, ಸಂಜೆ ಮನೆಗೆ ವಾಪಸ್ ಬಂದು ನೋಡುವಾಗ್ಗೆ ಮನೆಯ ಹೆಂಚನ್ನು ತೆಗೆದು ಯಾರೋ ಕಳ್ಳರು ಒಳನುಗ್ಗಿ ಗಾಡ್ರೇಜ್‌ನಲ್ಲಿಟ್ಟಿದ್ದ ೫೦ ಸಾವಿರ ನಗದು ಹಣ ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬAಧ ನಂಜಮ್ಮ ನೀಡಿದ ಪುಕಾರಿನ ಮೇರೆಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊ.ಸಂ. ೩೪/೨೦೨೧ ಕಲಂ ೪೫೪, ೩೮೦ ಐಪಿಸಿ ರೀತ್ಯ ಪ್ರಕರಣ ದಾಖಲಾಗಿ ತನಿಖೆಯನ್ನು ಕೈಗೊಳ್ಳಲಾಗಿತ್ತು.

ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರ ತಂಡ ಒಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಹಾಗೂ ಇಬ್ಬರು ಆರೋಪಿತರನ್ನು ಪತ್ತೆ ಹಚ್ಚಿ ಕಳುವಾದ ೩ ಚಿನ್ನದ ಉಂಗುರ, ೨ ಚಿನ್ನದ ಬಳೆಗಳು, ಒಂದು ಚಿನ್ನದ ಸರ, ಒಂದು ಚಿನ್ನದ ಪತ್ತಾಕ್ ಸೇರಿ ಒಟ್ಟು ೩೯ ಗ್ರಾಂ ಚಿನ್ನಾಭರಣ ಹಾಗೂ ರೂ.೧೩೬೦ ನಗದು ಹಣ ಸೇರಿ ಒಟ್ಟು ೧,೫೩,೩೬೦ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಪ್ರಾಪ್ತ ಬಾಲಕ ಸೇರಿದಂತೆ ನಲ್ಲೂರು ಗ್ರಾಮದ ಪಿ.ಆರ್. ದಿನೇಶ್, ಧನುಗಾಲದ ಬಿ.ಬಿ. ಸುಬ್ರಮಣಿ (ಸುಬ್ಬ) ಅವರುಗಳನ್ನು ಬಂಧಿಸಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ, ವೀರಾಜಪೇಟೆ ಪೊಲೀಸ್ ಉಪ ಅಧೀಕ್ಷಕ ಸಿ.ಟಿ. ಜಯಕುಮಾರ್ ಅವರ ಮಾರ್ಗದರ್ಶನದ ಮೇರೆಗೆ ಕಾರ್ಯಾಚರಣೆಯಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ಎಸ್.ಎನ್. ಜಯರಾಮ್, ಎಎಸ್‌ಐ ಸುಬ್ರಮಣಿ, ಎಎಸ್‌ಐ ಉದಯಕುಮಾರ್, ಸಿಬ್ಬಂದಿಗಳಾದ ಸುರೇಂದ್ರ, ಪಿ.ಎ. ಮಹಮದ್ ಆಲಿ, ಅಬ್ದುಲ್ ಮಜೀದ್, ಕೃಷ್ಣಮೂರ್ತಿ, ಯೋಗೇಶ್, ಲೋಕೇಶ್, ಹೇಮಲತಾ ರೈ ಮತ್ತು ಚಾಲಕ ಬಷೀರ್ ಭಾಗವಹಿಸಿದ್ದರು.