ಮಡಿಕೇರಿ, ಅ. ೫ : ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ವ್ಯವಹಾರದ ಪ್ರಮುಖ ದಿನಗಳಲ್ಲಿ ವಿದ್ಯುತ್ ಕಡಿತಗೊಳಿಸುವ ಮೂಲಕ ಸೆಸ್ಕ್ ಅಧಿಕಾರಿಗಳು ವರ್ತಕರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಅಂಬೆಕಲ್ಲು ನವೀನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಡಿಕೇರಿ ನಗರದ ಪ್ರಮುಖ ವ್ಯಾವಹಾರಿಕ ದಿನಗಳಾದ ಸೋಮವಾರ ಮತ್ತು ಶುಕ್ರವಾರ ವಿದ್ಯುತ್ ಕಡಿತಗೊಳಿಸುವುದರಿಂದ ವ್ಯಾಪಾರೋದ್ಯಮಿಗಳಿಗೆ, ವರ್ತಕರಿಗೆ ಹಾಗೂ ಹೊಟೇಲ್ ಮಾಲೀಕರುಗಳಿಗೆ ನಷ್ಟ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ.

ಗಾಂಧಿ ಜಯಂತಿ ಮತ್ತು ಭಾನುವಾರ ಎರಡು ದಿನ ರಜೆಯಿದ್ದು, ಸೋಮವಾರವೂ ವ್ಯವಹಾರವಿಲ್ಲದೆ ಎಲ್ಲಾ ಕ್ಷೇತ್ರದ ಮಂದಿ ತೊಂದರೆ ಅನುಭವಿಸಿದ್ದಾರೆ. ನ್ಯಾಯಾಲಯ ಮತ್ತು ಸರ್ಕಾರಿ ಕಚೇರಿಗಳಿಗೆ ಅಗತ್ಯ ದಾಖಲೆಗಳ ಪ್ರತಿಗಳನ್ನು ನೀಡಲಾಗದೆ ಸಾರ್ವಜನಿಕರು ಪರದಾಡಿದ್ದಾರೆ. ಆಸ್ಪತ್ರೆಗಳಲ್ಲೂ ರೋಗಿಗಳಿಗೆ ತೊಂದರೆಯಾಗಿದೆ. ಎಟಿಎಂ ನಿಂದ ಹಣ ಬಾರದೆ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಡಿಜಿಟಲ್ ಇಂಡಿಯಾ ಪರಿಕಲ್ಪನೆಯ ಈ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳು ಡಿಜಿಟಲೀಕರಣಗೊಂಡಿರುವುದರಿAದ ವಿದ್ಯುತ್ ಅಗತ್ಯವಾಗಿ ಬೇಕಾಗಿದೆ.

ಆದರೆ ಸೆಸ್ಕ್ ಅಧಿಕಾರಿಗಳು ತಮಗೆ ಇಷ್ಟ ಬಂದAತೆ ವಿದ್ಯುತ್ ಕಡಿತಗೊಳಿಸುತ್ತಿದ್ದು, ಹಬ್ಬದ ದಿನಗಳಲ್ಲೂ ವಿದ್ಯುತ್ ಸರಬರಾಜು ಮಾಡದೆ ಅಡಚಣೆ ಉಂಟು ಮಾಡುತ್ತಿದ್ದಾರೆ. ಸೆಸ್ಕ್ ತನ್ನ ತಪ್ಪನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ವರ್ತಕರ ಸಹಕಾರದಿಂದ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಅಂಬೆಕಲ್ಲು ನವೀನ್ ಎಚ್ಚರಿಕೆ ನೀಡಿದ್ದಾರೆ.

ಭಾನುವಾರ ಮತ್ತು ಸರ್ಕಾರಿ ರಜೆ ದಿನಗಳಂದು ವಿದ್ಯುತ್ ಕಡಿತಗೊಳಿಸಿ ತಮ್ಮ ಮಾರ್ಗದ ನಿರ್ವಹಣೆಯನ್ನು ಮಾಡಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.