ಮುಳ್ಳೂರು, ಅ. ೪: ಶನಿವಾರಸಂತೆ ರೋಟರಿ ಕ್ಲಬ್ ಮತ್ತು ಸಮುದಾಯ ಆರೋಗ್ಯ ಕೇಂದ್ರ ವತಿಯಿಂದ ಆರೋಗ್ಯ ಕೇಂದ್ರದಲ್ಲಿ ಆಟೋ ಚಾಲಕರು, ಗೂಡ್ಸ್ ಹಾಗೂ ಮ್ಯಾಕ್ಸಿಕ್ಯಾಬ್ ಮುಂತಾದ ವಾಹನ ಚಾಲಕರಿಗೆ ರಕ್ತ ಪರೀಕ್ಷೆ ಹಾಗೂ ಮಧುಮೇಹ ಪರೀಕ್ಷೆ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಚಂದನ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ-ಮಧುಮೇಹ ಕಾಯಿಲೆಯನ್ನು ಗುಣ ಪಡಿಸಲು ಸಾಧ್ಯ ಇರುವುದರಿಂದ ಯಾರೂ ಆತಂಕ ಪಡುವ ಅಗತ್ಯ ಇರುವುದಿಲ್ಲ ಎಂದರು. ಪ್ರತಿಯೊಬ್ಬರು ಪ್ರಾರಂಭದಲ್ಲೆ ರಕ್ತ ಮತ್ತು ಮಧುಮೇಹ ಪರೀಕ್ಷೆಯನ್ನು ಮಾಡಿಸಿಕೊಳ್ಳುವದರಿಂದ ಈ ಖಾಯಿಲೆಯನ್ನು ಸುಲಭವಾಗಿ ಗುಣ ಪಡಿಸಬಹುದು, ಬಹಳಷ್ಟು ರೋಗಿಗಳು ರಕ್ತ ಮತ್ತು ಮಧುಮೇಹ ಪರೀಕ್ಷೆ ಮಾಡಿಸಲು ಭಯ ಪಡುತ್ತಾರೆ ಕೊನೆಯ ಘಟ್ಟದಲ್ಲಿ ಪರೀಕ್ಷೆ ಮಾಡಿಸುವುದರಿಂದ ಮಧುಮೇಹ ಉಲ್ಭಣಗೊಳ್ಳುತ್ತದೆ ಇದರಿಂದ ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗದೆ ರೋಗಿ ತೊಂದರೆ ಪಡುತ್ತಾರೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯಾವುದೆ ಆತಂಕ, ಭಯ ಪಡದೆ ರಕ್ತ, ಮಧುಮೇಹ ಮುಂತಾದ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಖಾಯಿಲೆಗಳನ್ನು ಹೋಗಲಾಡಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಎಚ್.ಪಿ.ಮೋಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ-ರೋಟರಿ ಕ್ಲಬ್ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದರ ಜೊತೆಯಲ್ಲಿ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ, ಬಡ ಜನರು ಖಾಸಗಿ ಆಸ್ಪತ್ರೆ, ಲ್ಯಾಬ್‌ಗಳಲ್ಲಿ ಮಧುಮೇಹ, ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕಾದರೆ ಹೆಚ್ಚು ಹಣ ಕೊಡಬೇಕಾಗುತ್ತದೆ ಈ ದಿಸೆಯಲ್ಲಿ ರೋಟರಿ ಸಂಸ್ಥೆಯು ದಿನನಿತ್ಯ ಒತ್ತಡದಲ್ಲಿ ಕೆಲಸ ಮಾಡುತ್ತಿರುವ ವಾಹನ ಚಾಲಕರ ಆರೋಗ್ಯ ಹಿತದೃಷ್ಟಿಯಿಂದ ಸರಕಾರಿ ಆಸ್ಪತ್ರೆ ಸಹಭಾಗಿತ್ವದಲ್ಲಿ ಉಚಿತವಾಗಿ ಮಧುಮೇಹ ಮತ್ತು ರಕ್ತ ಪರೀಕ್ಷೆ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ವೈದ್ಯ ಡಾ.ಮೋಹಿತ್, ರೋಟರಿ ಕ್ಲಬ್ ಕಾರ್ಯದರ್ಶಿ ಎಂ.ಎಸ್.ವಸAತ್, ರೋಟರಿ ಸದಸ್ಯರಾದ ಕೆ.ಪಿ.ಜಯಕುಮಾರ್, ಶಿವಾನಂದ್, ಲ್ಯಾಬ್‌ಟೆಕ್ನಿಶಿಯನ್ ರುದ್ರೇಶ್, ರಶೀದ್ ಮುಂತಾದವರಿದ್ದರು.