*ವೀರಾಜಪೇಟೆ, ಅ. ೪: ವೀರಾಜಪೇಟೆಯ ಪುರಭವನದಲ್ಲಿ ಇಂದು ಸರ್ಕಾರದ ವಿವಿಧ ಸವಲತ್ತುಗಳನ್ನು ವಿತರಿಸುವ ಹಾಗೂ ನಿವೃತ್ತ ಪೌರಕಾರ್ಮಿಕರು ಮತ್ತು ಕೊರೊನಾ ವಾರಿಯರ್ಸ್ಗಳಾಗಿ ದುಡಿದ ಪೌರಕಾರ್ಮಿಕರನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಕೆ.ಜಿ ಬೋಪಯ್ಯ ಮಾತನಾಡಿ, ಹಲವಾರು ಕಾರ್ಯಕ್ರಮಗಳನ್ನು ಒಟ್ಟಿಗೆ ಹಮ್ಮಿಕೊಳ್ಳಲಾಗಿದೆ. ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯರ ಸಹಕಾರದಿಂದ ಅಭಿವೃದ್ಧಿಯತ್ತ ಸಾಗುತ್ತಿದೆ. ಇತ್ತೀಚೆಗೆ ವೀರಾಜಪೇಟೆ ಪಟ್ಟಣ ಪಂಚಾಯಿತಿ ಸರ್ವ ಸದಸ್ಯರು ಒಟ್ಟುಗೂಡಿ ನಗರದ ಅಭಿವೃದ್ಧಿಗೆ ಹೆಚ್ಚಿನ ಅನುದಾನಬೇಕೆಂದು ಪ್ರಸ್ತಾವನೆ ಇಟ್ಟುಕೊಂಡು ಮುಖ್ಯಮಂತ್ರಿಯನ್ನು ಭೇಟಿಯಾದರು. ಮುಖ್ಯಮಂತ್ರಿ ಅನುದಾನ ನೀಡಲು ಅಂಗೀಕಾರ ಮಾಡಿದ್ದಾರೆ ಎಂದರು.

ಪೌರ ಕಾರ್ಮಿಕರನ್ನು ಸನ್ಮಾನಿಸು ವುದು ಉತ್ತಮವಾದ ಕೆಲಸ ಎಂದ ಅವರು, ಲಸಿಕೆ ಪಡೆದುಕೊಂಡರು ಕೂಡಾ ಸರ್ಕಾರದ ಮಾರ್ಗ ಸೂಚಿ ಗಳನ್ನು ಮರೆಯಬಾರದು ಎಂದರು.

ಬಳಿಕ ಮಾತನಾಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಕುಮಾರ್, ಪೌರಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ವಿವರಿಸಿ ಹೇಳಿದರು. ಜೊತೆಗೆ ನಗರಕ್ಕೆ ಕುಡಿಯುವ ನೀರಿನ ಯೋಜನೆಯ ವಿಸ್ತರಣೆ ಹಾಗೂ ವಿನೂತನ ಮಾರುಕಟ್ಟೆ ನಿರ್ಮಾಣದ ಅಗತ್ಯತೆಯನ್ನು ಮುಂದಿಟ್ಟರು.

ಪ.ಪಂ. ಸದಸ್ಯೆ ದೇಚಮ್ಮ ಕಾಳಪ್ಪ ಮಾತನಾಡಿ, ವೀರಾಜಪೇಟೆ ಪ.ಪಂ. ಯಲ್ಲಿ ವರ್ಷಗಳಿಂದ ದಿನಗೂಲಿ ನೌಕರರಾಗಿ ದುಡಿಯುತ್ತಿರುವ ಪೌರಕಾರ್ಮಿಕರನ್ನು ಖಾಯಂ ನೌಕರರನ್ನಾಗಿ ನೇಮಿಸ ಬೇಕೆಂದು ಎಂದು ಮನವಿ ಮಾಡಿದರು.

ಪೌರಕಾರ್ಮಿಕರಾಗಿ ದುಡಿದು ಸೇವೆಯಿಂದ ನಿವೃತ್ತರಾದ ದಮಯಂತಿ ಹೆಚ್.ಕೆ., ವಸಂತ, ಚಿಕ್ಕರಾಮ ಅವರನ್ನು ಶಾಸಕರು ಸನ್ಮಾನ ಮಾಡಿದರು. ಪೌರಕಾರ್ಮಿಕರಿಗೆ ವಾರ್ಷಿಕವಾಗಿ ಸಿಗುವ ಏಳು ಸಾವಿರ ರೂಪಾಯಿ ಪ್ರೋತ್ಸಾಹಧನ ಜೊತೆಗೆ ಮಿಕ್ಸಿಯನ್ನು ವಿತರಿಸಲಾಯಿತು. ಎಂಟು ಜನ ಕೋವಿಡ್ ವಾರಿಯರ್ಸ್ಗಳನ್ನು ಶಾಸಕರು ಸನ್ಮಾನ ಮಾಡಿದರು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಲಯಕ್ಕೆ ಕಂಪ್ಯೂಟರ್, ಕುಕ್ಕರ್, ಮಿಕ್ಸಿ, ಹಾಗೂ ಅಲ್ಮೆರಾ, ರ‍್ಯಾಕ್ ವಿತರಣೆಯನ್ನು ಶಾಸಕ ಕೆ.ಜಿ ಬೋಪಯ್ಯ ನೆರವೇರಿಸಿದರು.