ಸಿದ್ದಾಪುರ, ಅ. ೫: ನೆಲ್ಯಹುದಿಕೇರಿಯ ಸಹಾಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಂತ್ರಸ್ತರ ಕುಟುಂಬಗಳಿಗೆ ತಾ. ೭ ರಂದು ಮನೆ ಹಾಗೂ ನಿವೇಶನಗಳನ್ನು ಹಸ್ತಾಂತರ ಮಾಡಲಾಗುವುದು ಎಂದು ನೆಲ್ಯಹುದಿಕೇರಿಯ ಸಹಾಯ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಎ.ಕೆ ಅಬ್ದುಲ್ಲಾ ತಿಳಿಸಿದರು. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ೨೦೧೯ರಲ್ಲಿ ಮಹಾಮಳೆಗೆ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಪ್ರವಾಹಕ್ಕೆ ಸಿಲುಕಿ ನೆಲ್ಯಹುದಿಕೇರಿ ಪಂಚಾಯಿತಿ ವ್ಯಾಪ್ತಿಯ ನದಿ ತೀರದ ನೂರಾರು ಮನೆಗಳು ನೆಲಸಮಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಇದನ್ನು ಅರಿತ ನೆಲ್ಯಹುದಿಕೇರಿಯ ಮುಸ್ಲಿಂ ಜಮಾಅತ್ ಸಮಿತಿಯ ಮೂಲಕ ಸಹಾಯ ಚಾರಿಟೇಬಲ್ ಟ್ರಸ್ಟ್ ಒಂದನ್ನು ರಚಿಸಲಾಯಿತು. ಈ ಟ್ರಸ್ಟ್ ವತಿಯಿಂದ ಹಲವಾರು ಮಂದಿ ದಾನಿಗಳ ಹಾಗೂ ದೇಣಿಗೆ ನೀಡುವವರ ಮೂಲಕ ನೆಲ್ಯಹುದಿಕೇರಿಯ ಬೆಟ್ಟದಕಾಡು ಭಾಗದಲ್ಲಿ ಎರಡೂವರೆ ಎಕರೆ ಜಾಗವನ್ನು ಖರೀದಿಸಲಾಯಿತು. ಈ ಜಾಗದಲ್ಲಿ ನಿರ್ಮಾಣ ಮಾಡಿರುವ ೧೫ ಮನೆಗಳನ್ನು ಮೊದಲ ಹಂತದಲ್ಲಿ ಸಂತ್ರಸ್ತರಿಗೆ ತಾ. ೭ ರಂದು ಹಸ್ತಾಂತರಿಸಲಾಗುವುದು. ಇದೇ ಸಂದರ್ಭದಲ್ಲಿ ಮನೆಗಳನ್ನು ಕಳೆದುಕೊಂಡಿರುವ ೩೯ ಕುಟುಂಬಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು. ಸಹಾಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಂತ್ರಸ್ತರಿಗೆ ಯಾವುದೇ ಜಾತಿ ಮತವಿಲ್ಲದೇ ಮನೆ ಹಾಗೂ ನಿವೇಶನಗಳನ್ನು ನೀಡಲಾಗುವುದು ಎಂದು ತಿಳಿಸಿದ ಅವರು ಮುಂದಿನ ದಿನಗಳಲ್ಲಿ ಎರಡನೇ ಹಂತದಲ್ಲಿ ೧೦ ಮನೆಗಳ ನಿರ್ಮಾಣ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಈಗಾಗಲೇ ಸಂತ್ರಸ್ತರಿಗೆ ಹಂಚಿಕೆ ಮಾಡುವ ಮನೆಗಳಿಗೆ ನಿವೇಶನ ಸೇರಿದಂತೆ ಮನೆ ನಿರ್ಮಾಣದ ವೆಚ್ಚವು ತಲಾ ರೂ. ೧೦ ಲಕ್ಷ ರೂಪಾಯಿ ಮೌಲ್ಯವಾಗಿದೆ ಎಂದರು.

ಚಾರಿಟೇಬಲ್ ಟ್ರಸ್ಟ್ನ ಸದಸ್ಯರಾದ ಎ.ಕೆ ಹಕ್ಕೀಂ ಮಾತನಾಡಿ ಚಾರಿಟೇಬಲ್ ಟ್ರಸ್ಟ್ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಟ್ರಸ್ಟ್ ವತಿಯಿಂದ ನೆಲ್ಯಹುದಿಕೇರಿ, ಬೆಟ್ಟದಕಾಡು ಭಾಗದಲ್ಲಿ ನಿರ್ಮಾಣ ಮಾಡಿರುವ ಸಂತ್ರಸ್ತರಿಗೆ ನೀಡುವ ಮನೆಗಳಿಗೆ ವಿದ್ಯುತ್ ಸಮಸ್ಯೆಯಾಗಿತ್ತು. ಈ ಬಗ್ಗೆ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರ ಗಮನಕ್ಕೆ ತರಲಾಗಿತ್ತು. ಕೂಡಲೇ ಸ್ಪಂದಿಸಿದ ಶಾಸಕರು ಸಂಬAಧಪಟ್ಟ ವಿದ್ಯುತ್ ನಿಗಮದ ಅಧಿಕಾರಿಗಳ ಬಳಿ ಚರ್ಚಿಸಿ ವಿದ್ಯುತ್ ಸಂಪರ್ಕವನ್ನು ಒದಗಿಸಿಕೊಟ್ಟರು. ಟ್ರಸ್ಟ್ ವತಿಯಿಂದ ಸಂತ್ರಸ್ತರಿಗೆ ನಿರ್ಮಾಣ ಮಾಡಲಾದ ಮನೆಗಳ ಪೈಕಿ ಬೆಟ್ಟದಕಾಡು ಭಾಗದ ನದಿ ತೀರದ ನಿವಾಸಿಗಳಿಗೆ ಮೊದಲ ಆದ್ಯತೆ ನೀಡಲಾಗಿದೆ. ಈ ಜಾಗಕ್ಕೆ ೧ ಎಕರೆ ಜಾಗವನ್ನು ಕೇರಳದ ತಣಲ್ ಸಂಸ್ಥೆಯು ಹಾಗೂ ಕೆ.ಎಂ. ಹಂಸ ಎಂಬವರು ೫೦ ಸೆಂಟ್ ಜಾಗವನ್ನು ನೀಡಿದ್ದಾರೆ ಎಂದು ಮಾಹಿತಿ ನೀಡಿದರು. ಸಂತ್ರಸ್ತರಿಗೆ ಲಾಟರಿ ಮುಖಾಂತರ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು. ಇನ್ನೂ ಕೆಲವು ಸಂತ್ರಸ್ತರಿಗೆ ನಿವೇಶನವನ್ನು ಕಾದಿರಿಸಲಾಗಿದೆ ಎಂದು ಮಾಹಿತಿ ನೀಡಿದರು. ತಾ. ೭ ರಂದು ಬೆಳಿಗ್ಗೆ ೧೦:೩೦ ಕ್ಕೆ ನಡೆಯುವ ಸಂತ್ರಸ್ತರಿಗೆ ಮನೆ ಹಂಚಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಪಾಣಕ್ಕಾಡ್ ಸಯ್ಯದ್ ಮುನವ್ವರ್ ಆಲಿ ಶಿಹಾಬ್ ತಂಙಳ್ ನೆರವೇರಿಸಲಿದ್ದಾರೆ. ಮುಖ್ಯ ಭಾಷಣಗಾರರಾಗಿ ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮತ್ತು ಮುಖ್ಯ ಇಮಾಮರು ಚಾಲ ಜುಮ್ಮ ಮಸ್ಜಿದ್ ಮುಖ್ಯಸ್ಥ ಮೌಲಾನ ಅಬ್ದುಲ್ ಶುಕೂರ್ ಹಸನಿ ಆಲ್-ಖಾಸಿಮಿ, ಮುಖ್ಯ ಅತಿಥಿಗಳಾಗಿ ಶಾಸಕರಾದ ಎಂ.ಪಿ ಅಪ್ಪಚ್ಚು ರಂಜನ್, ಯು.ಟಿ ಖಾದರ್, ಮಾಜಿ ಶಾಸಕ ಕೆ.ಎಂ ಇಬ್ರಾಹಿಂ, ತಣಲ್ ಸಂಸ್ಥೆಯ ಅಧ್ಯಕ್ಷ ಡಾ. ಇದ್ರೀಸ್, ಕಿರಿಕೊಡ್ಲಿ ಮಠ ಕೊಡ್ಲಿಪೇಟೆ ಸದಾಶಿವ ಸ್ವಾಮಿ, ಸಿದ್ದಾಪುರ ಸೆಂಟ್ ಮೇರಿಸ್ ಚರ್ಚ್ನ ಧರ್ಮಗುರುಗಳಾದ ಫಾದರ್ ಸಬಾಸ್ಟಿನ್ ಚಾಲಕಹಳ್ಳಿ, ನೆಲ್ಯಹುದಿಕೇರಿ ಗ್ರಾ.ಪಂ. ಅಧ್ಯಕ್ಷ ಸಾಬೂ ವರ್ಗೀಸ್ ಹಾಗೂ ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಹಾಯ ಚಾರಿಟೇಬಲ್ ಟ್ರಸ್ಟ್ನ ಗೌರವ ಅಧ್ಯಕ್ಷ ಅಬ್ದುಲ್ ನಜೀರ್ ಹಾಜಿ ಸದಸ್ಯರುಗಳಾದ ಪಿ.ಎ. ಕೋಯಾ, ಕೆ.ಎಂ. ಬಶೀರ್, ಕೆ.ಎಂ. ಮೊಹಮ್ಮದ್ ಕುಂಜಾನ್, ಅಬ್ದುಲ್ ಸಲಾಂ ಹಾಜರಿದ್ದರು.