ಕೂಡಿಗೆ, ಅ. ೫: ಕುಶಾಲನಗರದ ಕನ್ನಡ ಸಿರಿ ಕಸಾಪ ಸ್ನೇಹ ಬಳಗದ ವತಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ನಾವು ಎಂಬ ವಿಷಯದಲ್ಲಿ ಶಿಕ್ಷಕರಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ಮತ್ತು ಉಪನ್ಯಾಸ ಕಾರ್ಯಕ್ರಮ, ಹಾಗೂ ಕಿಗ್ಗಾಲು ಗಿರೀಶ್ ಅವರ ಕೃತಿ ಬಿಡುಗಡೆ ಸಮಾರಂಭವು ತಾ ೭ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಕುಶಾಲನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತ್ಯಿ ಭಾರದ್ವಾಜ್ ಕೆ. ಆನಂದ ತೀರ್ಥ ಅವರಿಂದ ಕಿಗ್ಗಾಲು ಗಿರೀಶ್ ಅವರ ಜಾಲದಲ್ಲಿ ಸಿಲುಕಿದ ಜಾಹ್ನವಿ ಎಂಬ ಪತ್ತೆದಾರಿ ಕಾದಂಬರಿ ಬಿಡುಗಡೆ ಆಗಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣ ಅಧಿಕಾರಿ ಹೆಚ್.ಕೆ. ಪಾಂಡು ನೆರವೇರಿಸಲಿದ್ದಾರೆ.

ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ನಿಕಟ ಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ವಹಿಸಲಿದ್ದಾರೆ. ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಕೆ.ಸಿ. ದಯಾನಂದ ಉಪನ್ಯಾಸ ನೀಡುವರು.

ಮುಖ್ಯ ಅತಿಥಿಯಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಹೆಚ್.ಎಸ್. ಚೇತನ್, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎನ್. ಮಂಜುನಾಥ ಭಾಗವಹಿಸುವರು. ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್, ಕುಶಾಲನಗರ ಬಾಲಕಿಯರ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪ, ಅಂಕನಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಹೇಮಂತ್ ಕುಮಾರ್, ಕುಶಾಲನಗರ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರಾಣಿ ಉಪಸ್ಥಿತರಿರುವರು. ಇದೆ ಸಂದರ್ಭದಲ್ಲಿ ೨೦೨೧-೨೨ನೇ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಬಳಗದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸ್ನೇಹ ಬಳಗದ ಪ್ರಕಟಣೆ ತಿಳಿಸಿದೆ.