ಮಡಿಕೇರಿ, ಅ. ೩: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಪ್ರತ್ಯೇಕ ಕಳವು ಪ್ರಕರಣಗಳನ್ನು ಭೇದಿಸಿರುವ ಗ್ರಾಮಾಂತರ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಸುಮಾರು ೧೦ ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಕರ್ಣAಗೇರಿ ಗ್ರಾಮದಲ್ಲಿ ತಾ. ೭.೧೦.೨೦೨೦ರಂದು ರಾತ್ರಿ ಮುಂಬೈನ ಆಶಾಕುಮಾರ್ ಎಂಬವರ ಮನೆಗೆ ನುಗ್ಗಿದ್ದ ಕಳ್ಳರು ಮನೆಯಲ್ಲಿದ್ದ ಸುಮಾರು ೭ ಲಕ್ಷ ಮೌಲ್ಯದ ವಿವಿಧ ಮಾದರಿಯ ಪುರಾತನ ಪಂಚಲೋಹ ಮತ್ತು ಕಂಚಿನ ವಿಗ್ರಹಗಳನ್ನು ಕಳವು ಮಾಡಿದ್ದರು. ಈ ಕುರಿತು ದಾಖಲಾದ ದೂರಿನನ್ವಯ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳಾದ ನೀರುಕೊಲ್ಲಿಯ ಮಂಜು (೨೨), ಚೀಯಣ್ಣ (ಲವ-೩೦) ಹಾಗೂ ಮೇಕೇರಿ ಗ್ರಾಮದ ಐ.ಎಂ. ರೋಹಿತ್ (೩೨) ಇವರುಗಳನ್ನು ನಿನ್ನೆ ದಿನ ಬಂಧಿಸಿದ್ದಾರೆ. ಬಂಧಿತರು ಕೂಲಿಕಾರ್ಮಿಕರಾಗಿದ್ದು, ಕೆಲಸಕ್ಕೆಂದು ತೆರಳಿದ್ದ ವೇಳೆ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದರು. ಕರ್ಣಂಗೇರಿಯಲ್ಲಿ ಕದ್ದ ಮಾಲನ್ನು ಆರೋಪಿಗಳು ನೀರುಕೊಲ್ಲಿ ವ್ಯಾಪ್ತಿಯ ಕಾಫಿ ತೋಟವೊಂದರಲ್ಲಿ ಗುಂಡಿ ತೋಡಿ ಅಡಗಿಸಿಟ್ಟಿದ್ದರು. ಅವುಗಳೆಲ್ಲವನ್ನೂ ವಶಪಡಿಸಿಕೊಂಡ ಪೊಲೀಸರು ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದಾಗ ಮತ್ತೆರಡು ಪ್ರಕರಣಗಳಲ್ಲಿ ಇವರುಗಳು ಭಾಗಿಯಾಗಿದ್ದುದು ಬೆಳಕಿಗೆ ಬಂದಿದೆ. ಕಗ್ಗೋಡ್ಲು ಸಮೀಪ ಖಾಸಗಿ ಕಾಫಿ ತೋಟವೊಂದರಲ್ಲಿ ಸುಮಾರು ೩ ಲಕ್ಷ ಮೌಲ್ಯದ ಕೃಷಿ ಯಂತ್ರೋಪಕರಣ ಗಳಾದ ವೀಡ್ ಕಟ್ಟರ್ ಯಂತ್ರ, ಚೈನ್ಸಾ ಯಂತ್ರ, ಅಗರ್ ಯಂತ್ರಗಳನ್ನು ಇವರುಗಳು ಕಳವು ಮಾಡಿದ್ದರು. ಇದರ ಜೊತೆಗೆ ಕೆ.ನಿಡುಗಣೆ, ಗ್ರಾಮದ ಮಾದಪ್ಪ ಎಂಬವರಿಗೆ ಸೇರಿದ ಅಂಗಡಿಯಿAದ ೨೦ ಸಾವಿರ ಮೌಲ್ಯದ ೩.೫ ಚೀಲ ಕಾಫಿಯನ್ನು ದೋಚಿದ್ದರು. ಅವೆಲ್ಲವೂ ಸೇರಿದಂತೆ ಒಟ್ಟು ೧೦ ಲಕ್ಷದ ೨೦ ಸಾವಿರ ಮೌಲ್ಯದ ಮಾಲನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಕಳವು ಮಾಡಲು ಬಳಸಿದ್ದ ೩.೫ ಲಕ್ಷ ಮೌಲ್ಯದ ಓಮಿನಿ (ಕೆಎ-೧೨ -ಎಂಎ-೫೮೯೦) ಕಾರನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಕರ್ಣAಗೇರಿಯಲ್ಲಿ ಕಳವು ನಡೆದ ಮನೆಯ ಮಾಲೀಕರಾದ ಆಶಾಕುಮಾರ್ ಮುಂಬೈ ಮೂಲದವ ರಾಗಿದ್ದು, ಕರ್ಣಂಗೇರಿಯಲ್ಲಿ ಮನೆ ಹೊಂದಿದ್ದರು. ನಿವೃತ್ತ ಏರ್ಫೋರ್ಸ್ ಅಧಿಕಾರಿಯಾಗಿದ್ದರು. ಕರ್ಣಂಗೇರಿ ಸಮೀಪದ ಬೇರೆ ತೋಟವೊಂದಕ್ಕೆ ಕೆಲಸಕ್ಕೆ ತೆರಳಿದ ವೇಳೆ ಆರೋಪಿಗಳು ಆಶಾಕುಮಾರ್ ಅವರ ಮನೆಯಲ್ಲಿ ಕಳವಿಗೆ ಸಂಚು ರೂಪಿಸಿದ್ದರು. ಮೇಕೇರಿ - ಮೂರ್ನಾಡು ನಡುವೆ ರಸ್ತೆ ಬದಿ ಕಾಡು ಕಡಿಯುವ ಕೆಲಸ ಮಾಡುತ್ತಿದ್ದ ವೇಳೆ ಕಗ್ಗೋಡ್ಲು ಬಳಿಯ ಖಾಸಗಿ ತೋಟವೊಂದರಿAದ ಕೃಷಿ ಯಂತ್ರೋಪಕರಣಗಳನ್ನು ದೋಚಲು ತೀರ್ಮಾನಿಸಿದ್ದರು. ಕಾಲೂರು ಬಳಿಯ ತೋಟವೊಂದರಲ್ಲಿ ಕೆಲಸಕ್ಕೆ ತೆರಳುವ ವೇಳೆ ಕೆ.ನಿಡುಗಣೆಯಲ್ಲಿ ಮಾದಪ್ಪ ಎಂಬವರ ಅಂಗಡಿಯಿAದ ಕಾಫಿ ಕಳವಿಗೆ ನಿರ್ಧರಿಸಿ ಕೃತ್ಯವೆಸಗಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ ನಿರ್ದೇಶನ ದಂತೆ ಪೊಲೀಸ್ ಉಪಾಧೀಕ್ಷಕ ಗಜೇಂದ್ರ ಪ್ರಸಾದ್ ಮಾರ್ಗ ದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕ ಎಸ್.ಎಸ್. ರವಿಕಿರಣ್, ನೇತೃತ್ವದಲ್ಲಿ ಪಿ.ಎಸ್.ಐ. ಎಂ.ಕೆ. ಸದಾಶಿವ, ಸಿಬ್ಬಂದಿಗಳಾದ ಕೆ.ಜೆ. ರವಿಕುಮಾರ್, ಎನ್.ಎಂ. ಮಂಜುನಾಥ್, ಹೆಚ್.ಕೆ. ರಾಜೇಶ್, ಎಂ.ಆರ್. ಸತೀಶ್ ಕುಮಾರ್, ಹೆಚ್.ಡಿ. ಪ್ರಸನ್ನಕುಮಾರ್, ಕೆ.ಡಿ. ದಿನೇಶ್, ಸಿ.ಎನ್. ನವೀನ್ ಕುಮಾರ್, ಕರಬಸಪ್ಪ ಚಕ್ರಸಾಲಿ, ಹರೀಶ್ ನಾಯ್ಕ್, ಶರಣಬಸು, ಐ.ಜೆ. ಅಂತೋಣಿ, ಎಸ್.ಆರ್. ಶಿಲ್ಪ, ದಿಲೀಪ್, ರಮೇಶ್, ಆರ್.ವೈ. ಪ್ರವೀಣ್ ಕುಮಾರ್, ಸಿ.ಡಿ.ಆರ್. ವಿಭಾಗದ ಸಿ.ಕೆ. ರಾಜೇಶ್, ಗಿರೀಶ್ ಇವರುಗಳನ್ನು ಒಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.