ಸೋಮವಾರಪೇಟೆ, ಅ. ೪: ಪ್ರಾಥಮಿಕ ಶಾಲಾ ಶಿಕ್ಷಕರು ಹಲವಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ತಕ್ಷಣ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ, ತರಬೇತಿಗಳನ್ನು ಬಹಿಷ್ಕರಿಸಿ ಶಿಕ್ಷಕರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದ ಸಂಘದ ಪದಾಧಿಕಾರಿಗಳು, ಇಲಾಖೆಯ ಅಧಿಕಾರಿ ಕಿರಣ್ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ತಾಲೂಕು ಘಟಕದ ಅಧ್ಯಕ್ಷ ಟಿ.ಕೆ. ಬಸವರಾಜು, ೨೦೧೭ರಲ್ಲಿ ತಿದ್ದುಪಡಿ ಮಾಡಿರುವ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ನಿಯಮದಿಂದ ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷರಿಗೆ ಅನ್ಯಾಯವಾಗಿದ್ದು ಈ ಬಗ್ಗೆ ಸಾಕಷ್ಟು ಬಾರಿ ಹಕ್ಕೊತ್ತಾಯ ಮಾಡಿದ್ದರೂ ಪ್ರಯೋಜನ ವಾಗಿಲ್ಲವೆಂದು ವಿಷಾದಿಸಿದರು.
ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವವರೆಗೂ ‘ನಿಷ್ಟಾ ೩.೦ ತರಬೇತಿ’ಯಲ್ಲಿ ಲಾಗಿನ್ ಆಗದೆ ತರಬೇತಿಯನ್ನು ಎಲ್ಲಾ ಶಿಕ್ಷಕರೂ ಬಹಿಷ್ಕರಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜಿ.ಪಿ.ಕವಿತಾ, ಖಜಾಂಚಿ ಎಸ್.ಎಂ.ರವಿ, ಜಿಲ್ಲಾಧ್ಯಕ್ಷ ಹೆಚ್.ಎನ್.ಮಂಜುನಾಥ್, ಉಪಾಧ್ಯಕ್ಷ ಎಸ್.ಎ. ಯೋಗೇಶ್, ಪ್ರೇಮ,ಆಶಾ,ಎನ್.ಎಂ.ನಾಗೇಶ್, ಸುರೇಶ್, ದಿನೇಶ್, ಉಮಾದೇವಿ ಸೇರಿದಂತೆ ಇತರರು ಹಾಜರಿದ್ದರು.