ಸೋಮವಾರಪೇಟೆ, ಅ. ೪: ವಿದ್ಯುತ್ ಶುಲ್ಕ ಪಾವತಿಸದ ರೈತರ ವಿದ್ಯುತ್ ಕಡಿತ ಮಾಡುತ್ತಿರುವ ಇಲಾಖೆಯ ಕ್ರಮವನ್ನು ಖಂಡಿಸಿ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಪಟ್ಟಣದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಸ್ಥಳೀಯ ಬಸವೇಶ್ವರ ಪ್ರತಿಮೆಯಿಂದ ಪ್ರತಿಭಟನಾ ಮೆರವಣಿಗೆ ತೆರಳಿದ ರೈತರು, ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತರು ಪ್ರತಿಭಟನೆ ನಡೆಸಿದ ಸಂದರ್ಭ ಪಟ್ಟಣದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಉಂಟಾಯಿತು. ಮುಖ್ಯರಸ್ತೆ, ಸಿ.ಕೆ.ಸುಬ್ಬಯ್ಯ ರಸ್ತೆ, ತ್ಯಾಗರಾಜ ರಸ್ತೆಯಲ್ಲಿ ವಾಹನಗಳು ನಿಲುಗಡೆಗೊಂಡವು. ದೇಶಾದ್ಯಂತ ನಡೆದ ರೈತ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರತಿಭಟನಾಕಾರರು ನಂತರ ಜೇಸೀ ವೇದಿಕೆ ಎದುರು ಜಮಾವಣೆಗೊಂಡು ಧರಣಿ ಮುಂದುವರೆಸಿದರು.
ರಾಜ್ಯದ ಹಿಂದಿನ ಸಾಲಿನ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ೧೦ ಹೆಚ್‌ಪಿ ವರೆಗಿನ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಆದೇಶ ನೀಡಿದ್ದರೂ ಕೊಡಗಿನಲ್ಲಿ ರೈತರು ತಮ್ಮ ಕೃಷಿ ಭೂಮಿಗೆ ಸಂಪರ್ಕ ಪಡೆದಿರುವ ವಿದ್ಯುತ್‌ಗೆ ಶುಲ್ಕ ಕಟ್ಟಿಲ್ಲ ಎಂಬ ನೆಪವೊಡ್ಡಿ ಸಂಪರ್ಕ ಸ್ಥಗಿತಗೊಳಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
೧೦ ಹೆಚ್.ಪಿ.ವರೆಗಿನ ಕಾಫಿ ಬೆಳೆಗಾರರ ವಿದ್ಯುತ್ ಶುಲ್ಕ ರದ್ದುಗೊಳಿಸಬೇಕು. ಕಾಫಿಯನ್ನು ಕೃಷಿ ಎಂದು ಪರಿಗಣಿಸಿ ಉಚಿತವಾಗಿ ವಿದ್ಯುತ್ ನೀಡಬೇಕು. ಕಾಫಿ, ಕರಿಮೆಣಸು, ಏಲಕ್ಕಿ ಬೆಳೆಗಳಿಗೂ ಬೆಂಬಲ ಬೆಲೆ ನೀಡಬೇಕು. ರೈತರ ಪಹಣಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕೆಂದು ಆಗ್ರಹಿಸಿದರು.
ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸ್ಥಗಿತಗೊಳಿಸಿರುವುದರಿಂದ ನೀರಿಲ್ಲದೇ ಈಗಾಗಲೇ ಕೃಷಿ ಹಾಳಾಗುತ್ತಿದೆ. ಕಷ್ಟಪಟ್ಟು ಕೈಗೊಂಡ ಕೃಷಿಯನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಮೈಸೂರು, ಮಂಡ್ಯ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ವರ್ಷಪೂರ್ತಿ ಉಚಿತ ವಿದ್ಯುತ್ ಪಡೆಯುತ್ತಿದ್ದು, ಕೊಡಗಿನಲ್ಲಿ ವರ್ಷದ ೩ ತಿಂಗಳು ಮಾತ್ರ ಪಂಪ್‌ಸೆಟ್ ಮೂಲಕ ನೀರು ಹಾಯಿಸಲಾಗುತ್ತಿದೆ. ಆದರೂ ಸಹ ಜಿಲ್ಲೆಯ ರೈತರ ಮೇಲೆ ಸರ್ಕಾರ ಅನುಕಂಪ ತೋರುತ್ತಿಲ್ಲ. ಈಗಾಗಲೇ ಗಣಗೂರು, ಆಲೂರುಸಿದ್ದಾಪುರ, ನೇರುಗಳಲೆ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯುತ್ ಸ್ಥಗಿತಗೊಳಿಸದಂತೆ ಸೂಚನೆ: ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಶಾಸಕ ಅಪ್ಪಚ್ಚುರಂಜನ್ ಅವರು ಪ್ರತಿಭಟನಾಕಾರರ ಮನವಿ ಆಲಿಸಿದರು. ಈಗಾಗಲೇ ವಿಧಾನ ಸಭಾ ಅಧಿವೇಶನದಲ್ಲೂ ಈ ಬಗ್ಗೆ ಗಮನ ಸೆಳೆಯಲಾಗಿದ್ದು, ೧೦ ಹೆಚ್‌ಪಿವರೆಗೆ ಉಚಿತ ವಿದ್ಯುತ್ ಒದಗಿಸುವಂತೆ ತಿಳಿಸಲಾಗಿದೆ ಎಂದರು.
ಸರ್ಕಾರಿ ಇಲಾಖೆಗಳೇ ತಮ್ಮ ವಿದ್ಯುತ್ ಶುಲ್ಕ ೫ ಸಾವಿರ ಕೋಟಿಯಷ್ಟು ಬಾಕಿ ಉಳಿಸಿಕೊಂಡಿವೆ. ಅಂತಹ ಕಚೇರಿಗಳ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸದೇ ರೈತರ ಸೌಲಭ್ಯಕ್ಕೆ ಕತ್ತರಿ ಹಾಕುವುದು ಸರಿಯಲ್ಲ. ತಕ್ಷಣ ಸ್ಥಗಿತಗೊಳಿಸಿರುವ ವಿದ್ಯುತ್ ಸಂಪರ್ಕವನ್ನು ಮರು ನೀಡಬೇಕು. ಮುಂದಿನ ದಿನಗಳಲ್ಲಿ ರೈತರಿಗೆ ನೀಡಲಾಗಿರುವ ಕೃಷಿ ಸಂಬAಧಿತ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಬಾರದು. ಈ ಬಗ್ಗೆ ಸಿಬ್ಬಂದಿಗಳಿಗೆ ಮಾಹಿತಿ ನೀಡುವಂತೆ ಅಭಿಯಂತರ ಹೇಮಂತ್ ಅವರಿಗೆ ಸೂಚಿಸಿದರು.
ನಂತರ ತಾಲೂಕು ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ಈ ಸಂಬAಧಿತ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ರವಾನಿಸಿದರು. ತಾ. ೮ರಂದು ಜಿಲ್ಲಾ ಕೇಂದ್ರದಲ್ಲಿ ರೈತಸಂಘದಿAದ ಪ್ರತಿಭಟನೆ ನಡೆಯಲಿದ್ದು, ಜಿಲ್ಲೆಯ ವಿವಿಧ ಭಾಗದಿಂದ ರೈತರು ಭಾಗವಹಿಸಲಿದ್ದಾರೆ ಎಂದು ರೈತ ಹೋರಾಟ ಸಮಿತಿಯ ಅಧ್ಯಕ್ಷ ಲಿಂಗೇರಿ ರಾಜೇಶ್ ತಿಳಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘಟನೆಗಳ ಪ್ರಮುಖರಾದ ದಿನೇಶ್, ಹೆಚ್.ಆರ್.ಸುರೇಶ್, ಯಡೂರು ಕುಶಾಲಪ್ಪ, ತಲ್ತರೆ ರಾಜಪ್ಪ, ಗಣಗೂರು ಚಂದ್ರಶೇಖರ್, ಮಂದಣ್ಣ, ಮೊಗಪ್ಪ, ಹೂವಯ್ಯ, ಎಸ್.ಎಂ. ಡಿಸಿಲ್ವಾ, ಗರಗಂದೂರು ಲಕ್ಷö್ಮಣ, ಸ್ವಾಗತ್ ಕುಶಾಲಪ್ಪ, ಡಿ.ಎಸ್. ಚಂಗಪ್ಪ ಸೇರಿದಂತೆ ಕರ್ನಾಟಕ ರಾಜ್ಯ ರೈತ ಸಂಘ, ಜಿಲ್ಲಾ ರೈತ ಹೋರಾಟ ಸಮಿತಿ, ಕಾಫಿ ಬೆಳೆಗಾರರ ಹೋರಾಟ ಸಮಿತಿ, ಗೌಡಳ್ಳಿ-ದೊಡ್ಡಮಳ್ತೆ ರೈತ ಹೋರಾಟ ಸಮಿತಿಯ ನೂರಾರು ಮಂದಿ ಭಾಗವಹಿಸಿದ್ದರು.