*ಗೋಣಿಕೊಪ್ಪ, ಅ. ೧: ರೂ. ೧.೧೨ ಕೋಟಿ ಅನುದಾನದಲ್ಲಿ ಅಮ್ಮತ್ತಿ, ಹೊಸೂರು, ಗೋಣಿಕೊಪ್ಪ ಸಂಪರ್ಕ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.
ಗೋಣಿಕೊಪ್ಪ-ಹೊಸೂರು ಸರಪಳಿ ರಸ್ತೆಯಲ್ಲಿ ಭೂಮಿ ಪೂಜೆ ನೆರವೇರಿಸಿದ ಶಾಸಕರು ೭.೫೦ ಕಿ.ಮೀ ಉದ್ದದ ರಸ್ತೆ ಡಾಂಬರೀಕರಣ, ೨ ಮೋರಿಗಳು ಹಾಗೂ ಸೇತುವೆ ಅಗಲೀಕರಣ, ೩೧ ಮೀಟರ್‌ವರೆಗಿನ ತಡೆಗೋಡೆ ನಿರ್ಮಾಣ ಸೇರಿ ೧ ಕೋಟಿ ೧೨ ಲಕ್ಷ ಅನುದಾನದಲ್ಲಿ ಮಳೆಯಿಂದ ಹಾನಿಯಾದ ಭಾಗಕ್ಕೆ ದುರಸ್ತಿ ಕಾಮಗಾರಿಯೂ ಈ ಸಂದರ್ಭ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಡಾಂಬರೀಕರಣಗೊಳ್ಳುವ ರಸ್ತೆಗಳು ಕನಿಷ್ಟ ೩ ವರ್ಷಗಳ ಅವಧಿಗಾದರೂ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕೆಂಬುದು ಎಲ್ಲರ ಅಭಿಲಾಷೆಯಾಗಿದೆ. ಈ ಕಾರಣ ರಸ್ತೆಯ ಬದಿಗಳಲ್ಲಿ ತೋಟದ ಮಾಲೀಕರು ನಿರ್ಮಿಸಿಕೊಂಡಿರುವ ಬೇಲಿಗಳನ್ನು ತೆರವುಗೊಳಿಸಲು ಅನುವು ಮಾಡಿಕೊಡಬೇಕು. ಅಲ್ಲದೇ ಮರಗಳ ಕೊಂಬೆಗಳನ್ನು ಕತ್ತರಿಸಿ ರಸ್ತೆ ಕಾಮಗಾರಿಗೆ ಸಹಕಾರ ಮನೋಭಾವ ವ್ಯಕ್ತಪಡಿಸಬೇಕು. ಪ್ರತಿಯೊಬ್ಬರ ಮನೆಯಲ್ಲಿಯೂ ವಾಹನಗಳು ಇರುವುದರಿಂದ ರಸ್ತೆ ಸಂಚಾರದ ಬಿಕ್ಕಟ್ಟು ಎದುರಾಗುತ್ತದೆ. ರಸ್ತೆಗಳು ಅಗಲೀಕರಣಗೊಂಡು ಅಭಿವೃದ್ಧಿ ಹೊಂದಿದಾಗ ವಾಹನ ಸಂಚಾರ ಸುಗಮವಾಗಬಲ್ಲದು. ಇದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ರಸ್ತೆ ಬದಿಗಳಲ್ಲಿ ಇರುವ ತೋಟದ ಮಾಲೀಕರು ಸಮಸ್ಯೆಯಾಗಿ ಕಾಡಬಾರದೆಂದು ಹೇಳಿದರು.
ಬಹುಗಾತ್ರದ ಮರದ ಕೊಂಬೆಗಳು ರಸ್ತೆಗೆ ಜೋತು ಬಿದ್ದಿರುವುದರಿಂದ ಮಳೆಗಾಲದ ಸಂದರ್ಭ ಡಾಂಬರೀಕರಣಕ್ಕೆ ಹನಿಗಳು ಉದುರಿ ರಸ್ತೆಯ ಡಾಂಬರೀಕರಣ ಕಿತ್ತು ಹೋಗುತ್ತವೆ. ಇದರಿಂದ ಮರದ ರೆಂಬೆಗಳನ್ನು ಕತ್ತರಿಸುವುದು ಉತ್ತಮ. ಇದಕ್ಕೆ ಅರಣ್ಯ ಅಧಿಕಾರಿಗಳು ಸಹ ನಿಯಮಗಳನ್ನು ಮುಂದಿಟ್ಟು ಮಾಲೀಕರಿಗೆ ಸಮಸ್ಯೆ ಮಾಡಬಾರದೆಂದು ತಿಳಿಸಿದರು.
ಈ ಸಂದರ್ಭ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ, ಕರ್ನಲ್ ಚೆಪುö್ಪಡಿರ ಮುತ್ತಣ್ಣ, ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಂದ್ಯAಡ ಶಾಂತಿ ಸೊಮಯ್ಯ, ಸದಸ್ಯರುಗಳಾದ ಮಧು, ಮುರುವಂಡ ಸೋಮಯ್ಯ, ಜಿ.ಪಂ. ಮಾಜಿ ಸದಸ್ಯ ಧರ್ಮಜ, ತಾ.ಪಂ. ಮಾಜಿ ಸದಸ್ಯ ಜಾನ್ ಥೋಮಸ್, ಗ್ರಾ.ಪಂ. ಮಾಜಿ ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ, ಮಾಜಿ ಸದಸ್ಯ ನರಸಿಂಹ, ಶಕ್ತಿಕೇಂದ್ರ ಪ್ರಮುಖ್ ಮುರುವಂಡ ಸಾಬು, ಲೋಕೋಪಯೋಗಿ ಹಿರಿಯ ಇಂಜಿನಿಯರ್ ಸುರೇಶ್, ಗುತ್ತಿಗೆದಾರ ಕೊಕ್ಕಲೆಮಾಡ ಯು. ತನುತಿಮ್ಮಯ್ಯ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧುದೇವಯ್ಯ ಹಾಜರಿದ್ದರು.