ಸೋಮವಾರಪೇಟೆ, ಅ.೧: ಕೃಷಿ ಉದ್ದೇಶಕ್ಕೆ ಬಳಸುತ್ತಿರುವ ರೈತರ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ವನ್ನು ಕಡಿತಗೊಳಿಸುತ್ತಿರುವುದನ್ನು ಖಂಡಿಸಿ ತಾ.೪ರಂದು ಸೋಮವಾರಪೇಟೆ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ರೈತ ಹೋರಾಟ ಸಮಿತಿ ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾಧ್ಯಕ್ಷ ಲಿಂಗೇರಿ ರಾಜೇಶ್, ಅವರು, ತಾಲೂಕಿನ ವಿವಿಧ ರೈತಪರ ಸಂಘಟನೆಗಳ ಸಹಕಾರದಿಂದ, ಬೆಳಿಗ್ಗೆ ೧೧ ಗಂಟೆಗೆ ಮುತ್ತಿಗೆ ಹಾಕಿ ಪ್ರತಿಭಟಿಸ ಲಾಗುವುದು. ಗಣಗೂರು, ಆಲೂರು-ಸಿದ್ಧಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಕೃಷಿಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು, ಕೃಷಿ ಬೆಳೆಗಳು ಒಣಗುತ್ತಿವೆ. ಬೇಷರತ್ ವಿದ್ಯುತ್ ಸಂಪರ್ಕವನ್ನು ನೀಡುವ ತನಕ, ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದರು.

ಕೊಡಗಿನಲ್ಲಿ ಬಹುತೇಕ ಎಲ್ಲಾ ರೈತರು ಕಾಫಿ ಬೆಳೆಯುತ್ತಿದ್ದಾರೆ. ಕಾಫಿಯೊಂದಿಗೆ ಇತರ ಬೆಳೆಯನ್ನು ಬೆಳೆಯಲಾಗುತ್ತಿದೆ. ನೀರಿಲ್ಲದೆ ಯಾವ ಕೃಷಿಯನ್ನೂ ಮಾಡಲು ಸಾಧ್ಯವಿಲ್ಲ. ಸರ್ಕಾರ ಸಣ್ಣ ಕಾಫಿ ಬೆಳೆಗಾರರ ೧೦ ಎಚ್.ಪಿ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿ. ಸೋಮಣ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭ ಕಾಫಿ ಬೆಳೆಗಾರರ ೧೦ ಎಚ್.ಪಿ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಮತ್ತು ವಿದ್ಯುತ್ ಬಿಲ್ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಅದು ಇನ್ನೂ ಜಾರಿಗೆ ಬಂದಿಲ್ಲ ಎಂದು ಸಮಿತಿಯ ಸಂಚಾಲಕ ಜಿ.ಎಂ. ಹೂವಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ರೈತರಿಗೆ ಸೌಲಭ್ಯ ನೀಡದೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಸರ್ಕಾರ ಕೃಷಿ ಕ್ಷೇತ್ರವನ್ನು ನಿರ್ಲಕ್ಷö್ಯ ಮಾಡಿದರೆ, ದೇಶ ಅಭಿವೃದ್ಧಿಯಲ್ಲಿ ಹಿನ್ನೆಡೆ ಅನುಭವಿಸಬೇಕಾಗುತ್ತದೆ. ಆಹಾರದ ಕೊರತೆಯೂ ಕಾಡಲಿದೆ. ಈ ಹಿನ್ನೆಲೆ ಸರ್ಕಾರ ರೈತರ ನೆರವಿಗೆ ಧಾವಿಸಲೇಬೇಕು ಎಂದರು.

ಸರ್ಕಾರಗಳು ಕೃಷಿ ಕ್ಷೇತ್ರವನ್ನು ಲಾಭದ ದೃಷ್ಟಿಯಿಂದ ನೋಡಬಾರದು. ಹೆಚ್ಚು ಹೆಚ್ಚು ಆಹಾರ ಉತ್ಪಾದನೆ ಆಗಬೇಕಾದರೆ ಕೃಷಿಕರಿಗೆ ಪ್ರತಿದಿನ ಉಚಿತವಾಗಿ ನೀರಿನ ಸೌಲಭ್ಯ ಬೇಕು. ಅಕಾಲಿಕ ಮಳೆ, ಅತಿವೃಷ್ಟಿಯಿಂದ ಕಾಫಿ ತೋಟಗಳು ರೋಗಪೀಡಿತವಾಗಿವೆ. ಸರ್ಕಾರ ರೈತ ವಿರೋಧಿ ನೀತಿಯನ್ನು ಇನ್ನಾದರೂ ಕೈಬಿಡಬೇಕು. ವಿದ್ಯುತ್ ವಲಯವನ್ನು ಖಾಸಗೀಕರಣ ಗೊಳಿಸಿದರೆ ರೈತರು ನಾಶವಾಗಲಿದ್ದಾರೆ ಎಂದು ಸಮಿತಿಯ ಜಿಲ್ಲಾ ಕಾರ್ಯದರ್ಶಿ ಡಿ.ಎಸ್.ಚಂಗಪ್ಪ ಹೇಳಿದರು. ತಾ. ೪ ರಂದು ನಡೆಯುವ ಪ್ರತಿಭಟನೆಗೆ ತಾಲೂಕಿನ ವಿವಿಧೆಡೆ ಗಳಿಂದ ರೈತರು ಭಾಗವಹಿಸಲಿದ್ದಾರೆ. ನ್ಯಾಯ ಸಿಗುವವರೆಗೂ ಹೋರಾಟ ನಡೆಯಲಿದೆ ಎಂದು ರೈತಸಂಘದ ಎ.ಆರ್. ಕುಶಾಲಪ್ಪ ತಿಳಿಸಿದರು.