ವರದಿ: ಕೋವರ್ ಕೊಲ್ಲಿ ಇಂದ್ರೇಶ್

ಬೆಂಗಳೂರು, ಅ. ೧: ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದ ಜಿಲ್ಲೆಯ ಅಂದಗೋವೆ ಮೂಲದ ಚಿತ್ರ ನಟಿ ಸೌಜನ್ಯ ಅವರ ತಂದೆ ಪ್ರಭು ಮಾದಪ್ಪ ಅವರು ಮಗಳ ಆತ್ಮಹತ್ಯೆ ಬಗ್ಗೆ ಸಂಶಯ ವ್ಯಕ್ತಪಡಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ತೆಲುಗು ನಟ ವಿವೇಕ್ ಹಾಗೂ ಈತನ ಪಿಎ ಮಹೇಶ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಮಾದಪ್ಪ ಅವರು ನೀಡಿರುವ ದೂರಿನ ಪ್ರಕಾರ ನನ್ನ ಮಗಳ ಸಾವಿಗೆ ನಟ ವಿವೇಕ್ ಹಾಗೂ ಮಹೇಶ್ ಕಿರುಕುಳವೇ ಕಾರಣವಾಗಿದೆ. ‘‘ನನ್ನ ಮಗಳು ಸೌಜನ್ಯ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸುವ ಸಲುವಾಗಿ ೫ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದಳು. ಒಂದು ವರ್ಷದ ಹಿಂದೆ ಕುಂಬಳಗೋಡು ಬಳಿಯ ಸನ್ ವರ್ತ್ ಅಪಾರ್ಟ್ಮೆಂಟ್‌ನಲ್ಲಿ ವಾಸವಾಗಿದ್ದಳು. ಈ ವೇಳೆ ನನ್ನ ಮಗಳು ಸೌಜನ್ಯಾಳಿಗೆ ಸಹ

(ಮೊದಲ ಪುಟದಿಂದ) ನಟ ವಿವೇಕ್ ಎಂಬವನ ಪರಿಚಯವಾಗಿತ್ತು. ವಿವೇಕ್ ನನ್ನ ಮಗಳನ್ನು ಪ್ರೀತಿಸುತ್ತೇನೆ, ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಪೀಡಿಸುತ್ತಿದ್ದ. ಈ ವಿಚಾರವನ್ನು ಮಗಳು ಸೌಜನ್ಯ, ನನ್ನ ಪತ್ನಿ ರೇಣುಕಾಳಿಗೆ ತಿಳಿಸಿದ್ದಳು. ಸೆಪ್ಟೆಂಬರ್ ೩೦ರಂದು ವಿವೇಕ್ ನನ್ನ ಪತ್ನಿ ರೇಣುಕಾಗೆ ಬೆಳಗ್ಗೆ ೯ಕ್ಕೆ ಫೋನ್ ಮಾಡಿದ್ದ. ಇದಾದ ಒಂದು ಗಂಟೆ ನಂತರ ನನ್ನ ದೊಡ್ಡ ಮಗಳು ಭಾಗ್ಯಶ್ರೀ ಕರೆಮಾಡಿ, ಸವಿ ಸತ್ತು ಹೋಗಿದ್ದಾಳೆ ಎಂದು ತಿಳಿಸಿದಳು.

ನನ್ನ ಮಗಳ ಬಳಿ ರೂ.೬ ಲಕ್ಷ ಹಣವಿತ್ತು. ಎರಡು ದಿನಗಳ ಹಿಂದೆ ನಾನೇ ೧ ಲಕ್ಷ ರೂಪಾಯಿಗಳನ್ನು ಆಕೆಯ ಅಕೌಂಟ್‌ಗೆ ಹಾಕಿದ್ದೆ. ನನ್ನ ಮಗಳ ಜೊತೆಯಲ್ಲಿದ್ದ ವಿವೇಕ್ ಹಾಗೂ ಮಹೇಶ್ ಕಿರುಕುಳ ತಾಳಲಾರದೆ ಸೆಪ್ಟೆಂಬರ್ ೩೦ರಂದು ಬೆಳಿಗ್ಗೆ ೧೦:೩೦ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೀಗಾಗಿ ವಿವೇಕ್ ಹಾಗೂ ಮಹೇಶ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ’’ ನಟಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಇದಕ್ಕೆ ಸಂಬAಧಿಸಿದAತೆ ಇದೀಗ ಕುಂಬಳಗೋಡು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಐಪಿಸಿ ಸೆಕ್ಷನ್ ೩೦೬ ಅನ್ವಯ ಆತ್ಮಹತ್ಯೆಗೆ ಪ್ರಚೋದನೆಯ ಆರೋಪ ಹೊರಿಸಲಾಗಿದ್ದು, ವಿವೇಕ್‌ನನ್ನು ಆರೋಪಿ ನಂಬರ್ ೧ ಮತ್ತು ಆತನ ಸಹಾಯಕ ಮಹೇಶನನ್ನು ಆರೋಪಿ ನಂಬರ್ ೨ ಎಂದು ಹೆಸರಿಸಲಾಗಿದೆ.

ಮಗಳ ಸಾವಿನ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಸೌಜನ್ಯ ಅವರ ತಾಯಿ ರೇಣುಕಾ ಅವರು ‘‘ಮಗಳು ಗುರುವಾರ ಬರುತ್ತೇನೆ ಅಂತ ಹೇಳಿದ್ದಳು. ಇನ್ನೊಬ್ಬ ಮಗ ಕೂಡ ಬೆಂಗಳೂರಲ್ಲಿದ್ದು, ಅವನು ಕೂಡ ಬರುತ್ತೇನೆ ಅಂತ ಹೇಳಿದ್ದ. ಆದರೆ ಆತ ಬೈಕಲ್ಲಿ ಬರುತ್ತೇನೆ, ಇವಳು ಇನ್ನೊಂದು ವಾರದಲ್ಲಿ ಬರುತ್ತೇನೆ ಎಂದು ಹೇಳಿದ್ದಳು. ಆಗ ನಾನು ಸ್ವಲ್ಪ ಬೇಗ ಬನ್ನಿ ಅಂತಲೂ ಜೋರು ಮಾಡಿದ್ದೆ. ಅವಳು ಆಯ್ತಮ್ಮ ಬರುತ್ತೇವೆ ಎಂದಿದ್ದಳು. ಅಲ್ಲದೆ ಅವಳಿಗೆ ಇಷ್ಟವಾಗಿದ್ದ ಸೊಪ್ಪು ಪಲ್ಯ ಮಾಡು, ಟೊಮೆಟೋ ಸಾಂಬಾರು ಮಾಡು ಅಂತಾನೂ ಹೇಳಿದ್ದಳು. ಆದರೆ ಮಾಡಿದ್ದನ್ನು ತಿನ್ನೋಕೆ ನನ್ನ ಮಗಳೇ ಬರಲಿಲ್ಲ’’ ಎಂದು ಹೇಳುತ್ತಾ ಮಗಳನ್ನು ನೆನೆದು ಕಣ್ಣೀರು ಹಾಕಿದರು.

ಶುಕ್ರವಾರ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಸೌಜನ್ಯ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಶವ ನೀಡಲಾಯಿತು. ನಟಿ ಸೌಜನ್ಯ ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡಬೆಲೆ ಗ್ರಾಮದ ಸನ್ ವರ್ತ್ ಅಪಾರ್ಟ್ಮೆಂಟ್ನಲ್ಲಿರುವ ಮನೆಯಲ್ಲಿ ಶುಕ್ರವಾರ ಕುಂಬಳಗೋಡು ಠಾಣೆ ಪೊಲೀಸರು ಮಹಜರು ಕಾರ್ಯ ನಡೆಸಿದರು. ನಟನ ಆಪ್ತ ಸಹಾಯಕ ಮಹೇಶ್ ಅವರನ್ನು ತಮ್ಮೊಂದಿಗೆ ಕರೆತಂದ ಪೊಲೀಸರು, ಅವರಿಂದ ವಿವರಣೆ ಪಡೆದರು. ನಟಿಯ ತಂದೆ ಪ್ರಭು ಮಾದಪ್ಪ ಸಹ ಈ ಸಂದರ್ಭ ಹಾಜರಿದ್ದರು.

ಈ ಕುರಿತು ಮಾತನಾಡಿದ ಕುಂಬಳಗೋಡು ಇನ್ಸ್ಪೆಕ್ಟರ್ ವಿಜಯ ಕುಮಾರ್ ಅವರು ಈರ್ವರನ್ನೂ ನಿನ್ನೆಯೇ ವಶಕ್ಕೆ ಪಡೆದುಕೊಳ್ಳಲಾಗಿದೆ. ಪೋಸ್ಟ್ ಮಾರ್ಟಂ ವರದಿಯಲ್ಲಿ ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡು ಬಂದಿದ್ದು ತನಿಖೆ ಮುಂದುವರೆದಿದೆ ಎಂದರು.

ಮೃತ ನಟಿಯ ಅಂತ್ಯಕ್ರಿಯೆ ಅಂದಗೋವೆಯಲ್ಲಿ ಇಂದು ಸಂಜೆ ನಡೆಯಿತು.