ಗೋಣಿಕೊಪ್ಪ ವರದಿ. ಸೆ. ೩೦: ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕೆ.ಜಿ .ರಾಮಕೃಷ್ಣ ಅಧ್ಯಕ್ಷತೆಯಲ್ಲಿ ಕಾವೇರಿ ಮಹಿಳಾ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ್ದ ದಸರಾ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಡಳಿತ ನಿರ್ದೇಶನದಂತೆ ಗೋಣಿಕೊಪ್ಪ ದಸರಾ ಆಚರಿಸುವ ನಿರ್ಧಾರ ಕೈಗೊಳ್ಳಲಾಯಿತು.
ಕಾವೇರಿ ದಸರಾ ಸಮಿತಿ ಸದಸ್ಯರು, ದಶಮಂಟಪ ಸಮಿತಿ ಅಧ್ಯಕ್ಷರು ದಸರಾ ಆಚರಣೆ ಬಗ್ಗೆ ಚರ್ಚಿಸಿ ನಿರ್ಧರಿಸಿದರು. ಅಕ್ಟೋಬರ್ ೭ ರಂದು ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆ, ಅ. ೧೫ ರಂದು ದೇವಿ ವಿಸರ್ಜಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಸರ್ಕಾರದ ನಿಯಮದೊಂದಿಗೆ ಆಚರಿಸಲು ಅಧ್ಯಕ್ಷರು ಮನವಿ ಮಾಡಿಕೊಂಡರು. ಕೊರೊನಾ ಹಿನ್ನೆಲೆ, ಜನರಿಗೂ ಕೂಡ ಒಂದಷ್ಟು ಬದಲಾವಣೆ ಅವಶ್ಯವಾಗಿದೆ. ಆದರೆ, ಸೋಂಕು ನಿಯಂತ್ರಣ ಕೂಡ ಮುಖ್ಯ. ಒಂದೊAದು ವಾಹನದ ಮೂಲಕ ಶೋಭಾಯಾತ್ರೆಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತು.
ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕೆ.ಜಿ. ರಾಮಕೃಷ್ಣ ಮಾತನಾಡಿ, ಸರಳ ದಸರಾ ಆಚರಣೆಗೆ ಕಳೆದ ವರ್ಷ ರೂ. ೫ ಲಕ್ಷ ಅನುದಾನ ಬಂದಿತ್ತು. ಈ ವರ್ಷ ಕೂಡ ಕನಿಷ್ಟ ೫ ಲಕ್ಷ ರೂ. ಅನುದಾನ ಬರುವ ನಿರೀಕ್ಷೆ ಇದೆ. ಮಡಿಕೇರಿ ದಸರಾ ಆಚರಣೆಗೆ ರೂ. ೧ ಕೋಟಿ ಅನುದಾನ ಘೋಷಣೆಯಾಗಿದೆ. ಇದರಂತೆ ೨೫ ಲಕ್ಷ ರೂ. ಅನುದಾನ ನೀಡಲು ಸರ್ಕಾರಕ್ಕೆ ಶಾಸಕ ಕೆ.ಜಿ. ಬೋಪಯ್ಯ ಮೂಲಕ ಮನವಿ ಮಾಡಿಕೊಳ್ಳಲಾಗಿದೆ. ಅನುದಾನ ಹಾಗೂ ಕೋವಿಡ್ ತಡೆಗೆ ಸರ್ಕಾರ ನೀಡುವ ನಿರ್ದೇಶನದೊಂದಿಗೆ ದಸರಾ ಆಚರಿಸಲು ಎಲ್ಲರ ಸಹಕಾರ ಅಗತ್ಯ ಎಂದರು. ದಶ ಮಂಟಪ ಸಮಿತಿ ಮೂಲಕ ತಲಾ ಒಂದೊAದು ವಾಹನದ ಮೂಲಕ ಶೋಭಾಯಾತ್ರೆಗೆ ಅವಕಾಶ ನೀಡಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು. ಅವಕಾಶ ನೀಡಿದರೆ, ಚಾಮುಂಡೇಶ್ವರಿ ದೇವಿಯ ಮೆರವಣಿಗೆಯೊಂದಿಗೆ ಶೋಭಾಯಾತ್ರೆ ನಡೆಸುವುದಾಗಿ ತಿಳಿಸಿದರು.
ರೂ. ೫ ಲಕ್ಷ ಅನುದಾನ ಲಭಿಸಿದರೆ ದಶಮಂಟಪ ಸಮಿತಿಗೆ ತಲಾ ರೂ. ೨೫ ಸಾವಿರ ಹಣ ಹಂಚಿಕೆ ಮಾಡಲಾಗುವುದು. ಹೆಚ್ಚು ಅನುದಾನ ನೀಡಿದರೆ ಮತ್ತೆ ಸಭೆ ಕರೆದು ಮುಂದಿನ ಆಚರಣೆ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಜಪ್ಪು ಸುಬ್ಬಯ್ಯ ಲೆಕ್ಕಪತ್ರ ಮಂಡಿಸಿದರು. ದಶಮಂಟಪ ಸಮಿತಿ ಅಧ್ಯಕ್ಷರಾಗಿ ಕಾಡ್ಯಮಾಡ ಚೇತನ್ ಅವರನ್ನು ಪುನರಾಯ್ಕೆ ಮಾಡಲಾಯಿತು.
ಪ್ರಮುಖರಾದ ಬಿ.ಎನ್. ಪ್ರಕಾಶ್, ಜಮ್ಮಡ ಅರಸು, ಅಜ್ಜಿಕುಟ್ಟೀರ ಸಜನ್, ಸುರೇಶ್ರೈ ಸಲಹೆ ನೀಡಿದರು. ಕಾವೇರಿ ದಸರಾ ಸಮಿತಿ ಸ್ಥಾಪಕ ಸದಸ್ಯ ರಾಮಚಾರ್, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸಿಬ್ಬಂದಿ ನವೀನ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಕಾವೇರಿ ದಸರಾ ಸಮಿತಿ ಗೌ. ಅಧ್ಯಕ್ಷ ಕುಲ್ಲಚಂಡ ಬೋಪಣ್ಣ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಬಿ. ಚೇತನ್, ದಶಮಂಟಪ ಸಮಿತಿ ಅಧ್ಯಕ್ಷ ಕಾಡ್ಯಮಾಡ ಚೇತನ್ ಉಪಸ್ಥಿತರಿದ್ದರು.