ಮಡಿಕೇರಿ, ಸೆ. ೩೦: ಅನುದಾನತ ಕಡಿತ, ಸರಳ ದಸರಾ ಆಚರಣೆ ಹಿನ್ನೆಲೆ ದಶಮಂಟಪ ಸಮಿತಿಗಳಿಗೆ ಬಿಡುಗಡೆಯಾದ ಅನುದಾನ ಪೈಕಿ ಹೆಚ್ಚಿನ ಅನುದಾನವನ್ನು ಮೀಸಲಿಡುವಂತೆ ದಶಮಂಟಪ ಹಾಗೂ ಕರಗ ಸಮಿತಿ ಮನವಿ ಮಾಡಿದೆ.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ದಶಮಂಟಪ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ಚರ್ಚೆಗಳು, ಸಲಹೆಗಳು ವ್ಯಕ್ತವಾದವು.
ಮಂಟಪಗಳಿಗೆ ಒಂದು ಟ್ರಾö್ಯಕ್ಟರ್ ಹಾಗೂ ಹೆಚ್ಚುವರಿ ವಾಹನಕ್ಕೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿ ಸಭೆಯಲ್ಲಿ ಬೇಡಿಕೆ ಸಲ್ಲಿಸುವಂತೆ ತೀರ್ಮಾನಿಸಲಾಯಿತು. ಸೌಂಡ್, ವಾದ್ಯಗೋಷ್ಠಿಗೆ ಅವಕಾಶ ನೀಡಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಬಿ.ಎನ್. ರಾಜೇಶ್ ಮಾತನಾಡಿ, ರೂ. ೧ ಕೋಟಿ ಪೈಕಿ ರೂ. ೭೫ ಲಕ್ಷ ರಸ್ತೆ ಅಭಿವೃದ್ಧಿಗೆ, ರೂ. ೨೫ ಲಕ್ಷ ದಸರಾ ಆಚರಣೆಗೆ ಸರಕಾರ ನೀಡಿದೆೆ. ಇದರಲ್ಲಿ ಶೇ ೭೦ ರಷ್ಟು ಅನುದಾನ ದಶಮಂಟಪ ಹಾಗೂ ಕರಗ ಸಮಿತಿಗಳಿಗೆ ನೀಡಬೇಕು ಎಂದರು.
ಕೋದಂಡ ರಾಮ ದೇವಾಲಯದ ಮಂಜುನಾಥ್, ಕರಗ ನಡೆಯುವ ಜಾಗದಲ್ಲಿ ಬೆಳಕಿನ ವ್ಯವಸ್ಥೆ ಮಾಡಬೇಕು. ಮಂಟಪಗಳಿಗೆ ತಲಾ ರೂ.೨ ಲಕ್ಷ ನೀಡಿ. ಅನುದಾನ ಹಂಚಿಕೆ ಬಗ್ಗೆ ಸಮಿತಿಗಳಿಗೆ ತೀರ್ಮಾನ ಬೇಗ ಹೇಳಿ ಹಾಗೂ ದಶಮಂಟಪ ಶೋಭಾಯಾತ್ರೆ ದಿನದಂದು ಅಂಗಡಿ ಬಲವಂತವಾಗಿ ಮುಚ್ಚಿಸಬಾರದು ಎಂದು ತಿಳಿಸಿದರು.
ದಸರಾ ಸಮಿತಿಯ ಗೌರವಾಧ್ಯಕ್ಷೆ ಸವಿತಾ ರೈ ಮಾತನಾಡಿ, ರೂ. ೧ ಕೋಟಿಯಲ್ಲಿ ೭೫ ಲಕ್ಷ ರಸ್ತೆ ಅಭಿವೃದ್ಧಿಗೆ ಮೀಸಲಿಟ್ಟಿರುವುದು ಅವೈಜ್ಞಾನಿಕ ವಿಂಗಡನೆಯಾಗಿದೆ. ದಶಮಂಟಪ ಸಮಿತಿ ಸಾಲದಲ್ಲಿ ಇದೆ. ಈ ಹಿನ್ನೆಲೆ ಬಿಡುಗಡೆಯಾಗಿರುವ ರೂ. ೧ ಕೋಟಿಯನ್ನು ದಸರಾ ಆಚರಣೆಗೆ ವಿನಿಯೋಗಿಸುವಂತೆ ಶಾಸಕರ ಗಮನಸೆಳೆಯಬೇಕೆಂದು ಸಲಹೆ ನೀಡಿದರು.
ಗೌರವಾಧ್ಯಕ್ಷ ಆನಂದ್ ಕೊಡಗು ಮಾತನಾಡಿ, ರಸ್ತೆ ಅಭಿವೃದ್ಧಿಗೆ ಹಲವು ಯೋಜನೆಗಳಿವೆ. ತ್ಯಾಪೆ ಹಾಕುವ ಕೆಲಸಕ್ಕೆ ರೂ. ೭೫ ಲಕ್ಷ ಬೇಕಾಗಿಲ್ಲ. ದಸರಾಕ್ಕೆ ಹೆಚ್ಚಿನ ಅನುದಾನ ಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್.ರಮೇಶ್ ಮಾತನಾಡಿ, ಎಲ್ಲಾ ಆಯಾಮದಲ್ಲೂ ಚಿಂತಿಸಿ ಅನುದಾನ ವಿಂಗಡಿಸಬೇಕು. ದಸರಾ ಜನೋತ್ಸವವಾಗಿದೆ. ಈಗಾಗಲೇ ರೂ. ೨೫ ಲಕ್ಷ ಬಿಡುಗಡೆಯಾಗಿದ್ದು, ರೂ. ೫೦ ಲಕ್ಷ ನೀಡುವ ನಿರೀಕ್ಷೆ ಇದೆ. ಈ ಬಗ್ಗೆ ಶಾಸಕರೊಂದಿಗೆ ಚರ್ಚಿಸಲಾಗಿದೆ. ಬಿಡುಗಡೆಯಾದ ಸಂಪೂರ್ಣ ಅನುದಾನ ದಶಮಂಟಪ ಸಮಿತಿಗಳಿಗೆ ನೀಡುವ ಮನಸಿದೆ. ಆದರೆ, ಎಲ್ಲವನ್ನೂ ಗಮನಿಸಬೇಕು. ಜವಾಬ್ದಾರಿ ನಿರ್ವಹಣೆ ಮಾಡಬೇಕು. ಸರಕಾರದ ನಿಯಮ ಏನೆಂದು ಇದುವರೆಗೂ ತಿಳಿದುಬಂದಿಲ್ಲ. ನಮ್ಮಗಳ ಅಭಿಪ್ರಾಯ ಜಿಲ್ಲಾಧಿಕಾರಿ ಹಾಗೂ ಶಾಸಕರ ಮುಂದಿಡುತ್ತೇವೆ. ಸರಳ ಆಚರಣೆ ಹಿನ್ನೆಲೆ ಸ್ಪರ್ಧೆಗೆ ಅವಕಾಶವಿಲ್ಲ. ಕರಗಗಳ ನಗರ ಪ್ರದಕ್ಷಿಣೆ ಎಂದಿನAತೆ ನಡೆಯಲಿವೆ. ದಸರಾ ಆಚರಣೆಗೆ ರೂ. ೬೦ ಲಕ್ಷ ಬಜೆಟ್ ಮಾಡಲಾಗಿತ್ತು. ಇದೀಗ ಕೇವಲ ರೂ. ೨೫ ಲಕ್ಷ ಬಿಡುಗಡೆಯಾಗಿದೆ. ರೂ. ೫೦ ಲಕ್ಷ ಬೇಕೆಂಬ ಬೇಡಿಕೆ ಮತ್ತೊಮ್ಮೆ ಸಲ್ಲಿಸುತ್ತೇವೆ. ನೀಡದಿದ್ದಲ್ಲಿ ಇರುವ ಹಣದ ಶೇ ೫೦ಕ್ಕೂ ಹೆಚ್ಚು ಭಾಗ ದಶಮಂಟಪ ಹಾಗೂ ಕರಗ ಸಮಿತಿಗೆ ನೀಡುತ್ತೇವೆ. ಶಾಸಕ ರಂಜನ್ ಅವರ ಪ್ರಯತ್ನದಿಂದ ಸರಕಾರ ಅನುದಾನ ಬಿಡುಗಡೆಗೊಳಿಸಿದೆ. ಹಣಕಾಸು ಇಲಾಖೆ ಹಣ ವಿಂಗಡಿಸಿದೆ. ತಾ. ೧ ರಂದು (ಇಂದು) ನಡೆಯುವ ಸಭೆಯಲ್ಲಿ ಹಣಕ್ಕೆ ಹೆಚ್ಚಿನ ಬೇಡಿಕೆ ಇಡಲಾಗುವುದು. ದಸರಾ ಆಚರಣೆ ಯಶಸ್ವಿಗೆ ಸಮಿತಿಗಳ ಸಹಕಾರ ಬೇಕು. ದಶಮಂಟಪ ಕರಗ ಇಲ್ಲದಿದ್ದಲ್ಲಿ ದಸರಾವೇ ಇಲ್ಲ. ಜಿಲ್ಲಾಧಿಕಾರಿ, ಶಾಸಕರ, ಸಚಿವರು ನಡೆಸುವ ಸಭೆಯಲ್ಲಿ ದಶಮಂಟಪ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಿದ ಚರ್ಚೆಯನ್ನು ಮುಂದಿಡಲಾಗುವುದು ಎಂದರು.
ದಶಮಂಟಪ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ ಮಾತನಾಡಿ, ದಸರಾ ಸಮಿತಿ, ದಶಮಂಟಪ ಸಮಿತಿ ಸಮನ್ವಯತೆ ಇರಬೇಕು. ರೂ. ೨೫ ಲಕ್ಷದ ಅನುದಾನ ಬಂದರೆ ಕರಗಗಳಿಗೆ ಹಾಗೂ ದಶಮಂಟಪಗಳಿಗೆ ಸಂಪೂರ್ಣ ಅನುದಾನ ನೀಡಿ ಹೆಚ್ಚಿನ ಒತ್ತು ನೀಡಬೇಕು. ಜನರ ಅಭಿಪ್ರಾಯದಂತೆ ಆಡಳಿತ ನಿರ್ಧಾರ ತೆಗೆದುಕೊಳ್ಳಬೇಕು. ಯಾವುದೇ ಗೊಂದಲವಾಗಬಾರದು ಎಂದರು.
ದಶಮಂಟಪ ಸಮಿತಿ ಪ್ರಮುಖರು ತಮ್ಮ ಸಲಹೆ, ಸೂಚನೆಗಳನ್ನು ನೀಡಿದರು. ಯಶಸ್ವಿ ಆಚರಣೆಗೆ ಸಹಕಾರ ನೀಡುತ್ತೇವೆ ಎಂದು ಹೇಳಿದರು.
ಸಭೆಯಲ್ಲಿ ದಶಮಂಟಪ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಟಿ. ಪ್ರಶಾಂತ್, ಗೌರವಾಧ್ಯಕ್ಷ ಜಿ.ವಿ. ರವಿಕುಮಾರ್, ಉಪಾಧ್ಯಕ್ಷ ಡಿಶು, ಪ್ರಮುಖರಾದ ರಘುರಾಂ, ಮಧುರಯ್ಯ, ಉದಯ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.